ವಿಜಯಪುರ :  ಜಿಲ್ಲೆಯಲ್ಲಿ ಮತ ಯಂತ್ರಗಳ ಬದಲಾವಣೆ ಮಾಡಿರುವ ಸಂಶಯ ಇರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವಿಜಯಪುರ ಲೋಕಸಭೆ ಕ್ಷೇತ್ರದ ಮೈತ್ರಿ ಪಕ್ಷಗಳ ಅಭ್ಯರ್ಥಿ ಡಾ.ಸುನಿತಾ ಚವ್ಹಾಣ ಹೇಳಿದರು. ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಇಂಡಿ ತಾಲೂಕಿನ ಜೇವೂರಿನಲ್ಲಿ ಮತಯಂತ್ರಗಳನ್ನು ಬದಲಿಸಿದ ಸಂಶಯವಿದೆ. 

ಮಂಗಳವಾರ ಜೇವೂರ ಗ್ರಾಮದಲ್ಲಿ ಎಂಟರಿಂದ ಹತ್ತು ಜನ ದೊಡ್ಡ ಬ್ಯಾಗ್‌ಗಳನ್ನು ಹಿಡಿದುಕೊಂಡು ನಿಂತಿದ್ದರು. ಅವರನ್ನು ವಿಚಾರಿಸಿದಾಗ ಅವರು ಅನುಮಾನಾಸ್ಪದವಾಗಿ ಜಾಗ ಖಾಲಿ ಮಾಡಿದ್ದಾರೆ. ಆ ಭಾಗದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಮತ ಬರುವ ನಿರೀಕ್ಷೆಯಿಂದ ಮತ ಯಂತ್ರಗಳ ಬದಲಾವಣೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ಜತೆಗೆ, ಈ ಕುರಿತು ಚುನಾವಣಾಧಿಕಾರಿಗಳಿಗೆ ತನಿಖೆ ನಡೆಸುವಂತೆ ದೂರಿನಲ್ಲಿ ಕೋರುತ್ತೇನೆ ಎಂದರು.

ಐಟಿ ದಾಳಿ ಬಿಜೆಪಿ ಅಭ್ಯರ್ಥಿ ಕುತಂತ್ರ: ನಮ್ಮ ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿರುವುದು ನೂರಕ್ಕೆ ನೂರರಷ್ಟುಬಿಜೆಪಿ ಅಭ್ಯರ್ಥಿ ಕುತಂತ್ರದಿಂದ ಎಂದು ಆರೋಪಿಸಿದ ಅವರು, ಚುನಾವಣೆಯಲ್ಲಿ ನಮ್ಮನ್ನು ಹೆದರಿಸಲು ಸಂಬಂಧಿಕರ ಮನೆ ಮೇಲೆ ಐಟಿ ದಾಳಿ ಮಾಡಿಸಲಾಗಿದೆ ಎಂದು ಆರೋಪಿಸಿದರು.