ಚೌಕೀದಾರ್‌ ಚೋರ್‌ ಹೈ ಎಂದ ರಾಹುಲ್‌ಗೆ ಸಂಕಷ್ಟ|  ರಫೇಲ್‌ ತೀರ್ಪು ಉಲ್ಲೇಖಿಸಿ ಹೇಳಿದ್ದ ಕಾಂಗ್ರೆಸ್‌ ಅಧ್ಯಕ್ಷ| ಏ.22ರೊಳಗೆ ಸ್ಪಷ್ಟನೆ ನೀಡಿ: ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ[ಏ.16]: ರಫೇಲ್‌ ಯುದ್ಧವಿಮಾನ ಖರೀದಿ ವ್ಯವಹಾರದಲ್ಲಿ ‘ಚೌಕೀದಾರ್‌ ನರೇಂದ್ರ ಮೋದಿ ಚೋರ್‌ ಹೈ ಎಂದು ಸುಪ್ರೀಂ ಕೋರ್ಟೇ ಹೇಳಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನೀಡಿದ್ದ ಹೇಳಿಕೆ ಬಗ್ಗೆ ಸರ್ವೋಚ್ಚ ನ್ಯಾಯಾಲಯವು, ಖುದ್ದು ರಾಹುಲ್‌ ಅವರಿಂದ ಸ್ಪಷ್ಟನೆ ಬಯಸಿದೆ. ಏಪ್ರಿಲ್‌ 22ರೊಳಗೆ ಸ್ಪಷ್ಟೀಕರಣ ನೀಡಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷರಿಗೆ ಸೂಚಿಸಿದೆ.

ಏಪ್ರಿಲ್‌ 10ರಂದು ಅಮೇಠಿಯಲ್ಲಿ ರಾಹುಲ್‌ ನೀಡಿದ್ದಾರೆ ಎನ್ನಲಾದ ಈ ಹೇಳಿಕೆಗೆ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಕೋರಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಸೋಮವಾರ ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ

ರಂಜನ್‌ ಗೊಗೋಯ್‌ ಅವರ ನೇತೃತ್ವದ ತ್ರಿಸದಸ್ಯ ಪೀಠ, ‘ರಫೇಲ್‌ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಿ ಸುಪ್ರೀಂ ಕೋರ್ಟ್‌ ಹೇಳಿಕೆಯೆಂದು ಬಿಂಬಿಸಲಾಗಿದೆ’ ಎಂದು ಹೇಳಿತು..

ಕೋರ್ಟ್‌ನ ಈ ಸೂಚನೆಯ ಬೆನ್ನಲ್ಲೇ ಕಾಂಗ್ರೆಸ್‌ಗೆ ಹಿನ್ನಡೆಯಾದಂತೆ ಕಂಡುಬಂದಿದ್ದು, ‘ಸ್ಪಷ್ಟೀಕರಣ ನೀಡುತ್ತೇವೆ’ ಎಂಬ ಒಂದು ಸಾಲಿನ ಉತ್ತರ ಮಾತ್ರ ನೀಡಿದೆ. ಆದರೆ ‘ರಾಹುಲ್‌ ಸುಳ್ಳು ಬಟಾಬಯಲಾಗಿದೆ’ ಎಂದಿರುವ ಬಿಜೆಪಿ, ಅವರ ಕ್ಷಮೆಗೆ ಆಗ್ರಹಿಸಿದೆ.

ಕೋರ್ಟ್‌ ಸ್ಪಷ್ಟನೆ:

‘ರಾಹುಲ್‌ ಗಾಂಧಿ ಅವರು ಮಾಡಿದ್ದಾರೆ ಎನ್ನಲಾದ ಭಾಷಣಗಳಲ್ಲಿ ರಫೇಲ್‌ ಒಪ್ಪಂದದ ಕುರಿತಾದ ನಮ್ಮ ಅಭಿಪ್ರಾಯ, ತೀರ್ಪನ್ನು ತಪ್ಪಾಗಿ ಕೋರ್ಟ್‌ ಹೇಳಿಕೆಯೆಂದು ಬಿಂಬಿಸಲಾಗಿದೆ. ಇಂಥ ಅಭಿಪ್ರಾಯವನ್ನು ನ್ಯಾಯಾಲಯ ಹೇಳಿಯೇ ಇಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇವೆ’ ಎಂದು ಅವರು ತಿಳಿಸಿದರು.

‘ಈ ಸ್ಪಷ್ಟೀಕರಣವನ್ನು ನೀಡುತ್ತ ರಾಹುಲ್‌ ಗಾಂಧಿ ಅವರಿಂದ ಇದೇ 22ನೇ ತಾರೀಖಿನೊಳಗೆ ಸ್ಪಷ್ಟೀಕರಣ ಬಯಸುತ್ತಿದ್ದೇವೆ. ಮುಂದಿನ ವಿಚಾರಣೆ ಏಪ್ರಿಲ್‌ 23ರಂದು ನಡೆಯಲಿದೆ’ ಎಂದು ಹೇಳಿತು.

ಇದಕ್ಕೂ ಮುನ್ನ ಲೇಖಿ ಅವರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟಗಿ, ‘ಚೌಕೀದಾರ್‌ ನರೇಂದ್ರ ಮೋದಿ ಚೋರ್‌ ಹೈ ಎಂದು ಸುಪ್ರೀಂ ಕೋರ್ಟೇ ಹೇಳಿದೆ’ ಎಂದು ರಾಹುಲ್‌ ಮಾಡಿದ ಭಾಷಣವು ನ್ಯಾಯಾಂಗ ನಿಂದನೆಯಾಗಿದೆ ಎಂದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.