ಮಳವಳ್ಳಿ[ಮಾ.14]: ಕಳೆದ ಒಂದು ವಾರದಿಂದ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದ್ದ ಅಭಿಷೇಕ್‌, ಬುಧವಾರ ತಾಯಿ ಸುಮಲತಾ ಅವರ ಪ್ರಚಾರಕ್ಕೆ ಸಾಥ್‌ ನೀಡಿದರು. ಇದೇ ವೇಳೆ ಮಳವಳ್ಳಿ ತಾಲೂಕಿನ ಹಾಡ್ಲಿ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಷೇಕ್‌ ತಮ್ಮ ತಂದೆ ಅಂಬರೀಷ್‌ ಡೈಲಾಗ್‌ ಹೊಡೆಯುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳ ಶಿಳ್ಳೆ-ಚಪ್ಪಾಳೆ ಮುಗಿಲು ಮುಟ್ಟಿತು. ಕಾಂಗ್ರೆಸ್‌ನ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಸುಮಲತಾ ಅವರ ಪರ ಅಬ್ಬರದ ಪ್ರಚಾರ ನಡೆಸಿದ್ದು ಗಮನಾರ್ಹವಾದ ಸಂಗತಿಯಾಗಿತ್ತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್‌, ಮುಂದಿಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ಇಡಬೇಡಿ ಎಂಬ ಕೂಗು ಎಲ್ಲೆಡೆ ಎದ್ದಿದೆ ಎಂದರು. ಚುನಾವಣಾ ಪ್ರಚಾರ ನನಗೇನು ಹೊಸದಲ್ಲ. ಅಪ್ಪನ ಜೊತೆ ಪ್ರಚಾರ ಮಾಡುತ್ತಿದ್ದೆ. ಆದರೆ, ಅನುಭವ ಕಡಮೆಯಿದೆ. ಮಳವಳ್ಳಿ ಹುಚ್ಚೇಗೌಡರ ಸೊಸೆ. ಜೊತೆ ಅವರ ಮೊಮ್ಮಗ ನಾನೂ ಕೂಡ ಬಂದಿದ್ದೇನೆ. ನಮ್ಮ ಅಪ್ಪನಿಗೆ ತೋರಿಸಿದ ಪ್ರೀತಿ, ವಿಶ್ವಾಸವನ್ನು ಅಮ್ಮ ಸುಮಲತಾ ಮೇಲೂ ತೋರಿಸಿ, ಆಶೀರ್ವದಿಸಿ ಎಂದು ಮನವಿ ಮಾಡಿದರು. ಪ್ರಚಾರಕ್ಕೆ ಚಿತ್ರರಂಗದವರು ಬಂದೇ ಬರುತ್ತಾರೆ. ಕಾದು ನೋಡಿ ಎಂದರು.

ಮಠ-ಮಂದಿರಗಳಿಗೆ ಭೇಟಿ:

ಹಲಗೂರು ತಾಲೂಕಿನಲ್ಲಿ ಪ್ರವಾಸ ಮಾಡಿದ ಸುಮಲತಾ ಮತ್ತು ಅಭಿಷೇಕ್‌, ಪಂಡಿತಹಳ್ಳಿ, ದಾಸನದೊಡ್ಡಿ, ಹೊಸಹಳ್ಳಿ, ಬೆಳಕವಾಡಿ ಗ್ರಾಮಗಳಿಗೆ ತೆರಳಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ತೆರೆದ ವಾಹನದಲ್ಲಿ ರೋಡ್‌ ಷೋ ನಡೆಸಿದರು. ಈ ವೇಳೆ ಸುಮಲತಾ, ಅಭಿಷೇಕ್‌ರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಬಿ.ಜಿ.ಪುರದ ಮಂಟೇಸ್ವಾಮಿ ಮಠಕ್ಕೆ ಭೇಟಿ ನೀಡಿ, ಮಂಟೇಸ್ವಾಮಿ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷ ಪ್ರಭುಲಿಂಗರಾಜೇ ಅರಸು ಅವರ ಆಶೀರ್ವಾದ ಪಡೆದರು. ಹೊರಮಠಕ್ಕೆ ತೆರಳಿ ಚಂದ್ರಶೇಖರ ಶ್ರೀಗಳ ಆಶೀರ್ವಾದ ಪಡೆದು, ಶ್ರೀಮಠದಲ್ಲಿ ನೂರಾರು ಅಭಿಮಾನಿಗಳೊಡನೆ ಊಟ ಮಾಡಿದರು. ತದನಂತರ ತೆಂಕಹಳ್ಳಿ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ನೆರವೇರಿಸಿದರು. ಇದಾದ ಬಳಿಕ ಮಳವಳ್ಳಿಯ ಅನಂತ್‌ ರಾಮ… ವೃತ್ತದಲ್ಲಿ ಅಂಬರೀಷ್‌ ಪತ್ನಿ ಮತ್ತು ಪುತ್ರನಿಗೆ ಅಭಿಮಾನಿಗಳು ಜೆಸಿಬಿ ಯಂತ್ರದ ಮೂಲಕ ಬೃಹತ್‌ ಹೂವಿನ ಹಾರವನ್ನು ಹಾಕಿ ಸ್ವಾಗತಿಸಿದರು.

ಜೀವನ ಪೂರ್ತಿ ನಿಮ್ಮೊಂದಿಗಿರುವೆ: ಸುಮಲತಾ

ನನ್ನನ್ನು ನೀವು ಆಶೀರ್ವಾದಿಸಿ ಗೆಲ್ಲಿಸಿದರೆ ಜೀವನ ಪೂರ್ತಿ ನಿಮ್ಮೊಂದಿಗಿರುತ್ತೇನೆ ಎಂದು ಸುಮಲತಾ ಭಾವುಕರಾದರು. ಹಲಗೂರಿನಲ್ಲಿ ಮಾತನಾಡಿದ ಅವರು, ನಾವು ಒಳ್ಳೆಯ ಉದ್ದೇಶದಿಂದ ಕಾರ್ಯಪ್ರವೃತ್ತರಾಗಿದ್ದೇವೆ ಎಂಬುದನ್ನು ಜನರಿಗೆ ತಿಳಿಸಲು ‘ಸುಮಲತಾ ನನ್ನ ಹೆಜ್ಜೆ, ನನ್ನ ಜನ ಅಭಿಯಾನ’ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಜನರಿಗೆ ಏನಾದರೂ ಸಂಶಯ, ಸಮಸ್ಯೆಗಳಿದ್ದರೆ ನೇರವಾಗಿ ಸ್ಪಷ್ಟನೆ ನೀಡಲು ಅನುಕೂಲವಾಗಲೆಂದು ನಾನು ಫೇಸ್‌ಬುಕ್‌ ಖಾತೆ ತೆರೆದಿದ್ದೇನೆ ಎಂದು ಹೇಳಿದರು. ನನ್ನ ನಿರ್ಧಾರವನ್ನು ಅಧಿಕೃತವಾಗಿ ಶೀಘ್ರದಲ್ಲೇ ಪ್ರಕಟಿಸುತ್ತೇನೆ. ಚಿತ್ರರಂಗದ ಯಾರ್ಯಾರು ನನ್ನ ಪರ ಇರುತ್ತಾರೆ ಅನ್ನೋದನ್ನು ಕಾದು ನೋಡಿ ಎಂದರು.