ನಾಗಮಂಗಲ (ಏ. 09): ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಕುತಂತ್ರ ಮಾಡಿಲ್ಲ. ನಿಖಿಲ್ ನಾಮಪತ್ರ ಸಲ್ಲಿಕೆ ವಿಷಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ನಿಜವಾಗಿಯೂ ಮಾಡಿರುವ ತಪ್ಪುಗಳನ್ನು ಅಧಿಕಾರಿಗಳಿಗೆ ಎತ್ತಿ ತೋರಿಸಿದ್ದೇನೆ ಅಷ್ಟೆ. ಇದನ್ನೇ ಅವರು ಕುತಂತ್ರ ಎಂದು ಆರೋಪಿಸುತ್ತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್‌ ತಿಳಿಸಿದರು.

ತಾಲೂಕಿನ ಚಿಣ್ಯ, ಅಲ್ಪಹಳ್ಳಿ, ಹೊಣಕೆರೆ, ಬ್ರಹ್ಮದೇವರಹಳ್ಳಿ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೋಮವಾರ ಬಿರುಸಿನ ಪ್ರಚಾರ ನಡೆಸಿದ ಅವರು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್‌ನವರು ನನ್ನ ವಿರುದ್ಧ ಇಲ್ಲದ ಅಪಪ್ರಚಾರ ಮಾಡುವ ಮೂಲಕ ಮತದಾರರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಅಂಬರೀಷ್‌ ಮುಂದೆ ಕೈಕಟ್ಟಿನಿಲ್ಲುತ್ತಿದ್ದರು:

ಅಂಬರೀಷ್‌ ಮಾಡುತ್ತಿದ್ದ ಅಭಿವೃದ್ಧಿ ಕೆಲಸಕ್ಕೆ ಎಂದೂ ಪ್ರಚಾರ ತೆಗೆದುಕೊಳ್ಳುತ್ತಿರಲಿಲ್ಲ. ಅಂಬರೀಷ್‌ ಇದ್ದಾಗ ಅವರ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಅಂಬರೀಷ್‌ ಮುಂದೆ ಅಂದು ಕೈಕಟ್ಟಿಕೊಂಡು ನಿಲ್ಲುತ್ತಿದ್ದವರೆಲ್ಲರೂ ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದಕ್ಕೆ ನೀವೇ ಉತ್ತರ ಕೊಡಬೇಕು ಎಂದರು.

ಖರ್ಚಿಗೆ 10 ಸಾವಿರ ನೀಡಿದ ಅಭಿಮಾನಿ

ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದ ಅಭ್ಯರ್ಥಿ ಸುಮಲತಾ ಅವರಿಗೆ ಬ್ರಹ್ಮದೇವರಹಳ್ಳಿಯ ಅಂಬರೀಷ್‌ ಅಭಿಮಾನಿ ಟಮೋಟೋ ಚಂದ್ರು ಎಂಬುವರು ಚುನಾವಣಾ ಖರ್ಚಿಗಾಗಿ 10 ಸಾವಿರ ನಗದು ಹಣ ನೀಡಿದರು. ಸುಮಲತಾಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಬೆಂಬಲ ಮುಂದುವರೆದಿದ್ದು, ಸೋಮವಾರ ಸಹ ಎರಡೂ ಪಕ್ಷಗಳ ಬಾವುಟ ಹಿಡಿದು ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದರು.

ಅಕ್ರಮ ಆಸ್ತಿ ಇದ್ದಲ್ಲಿ ಐಟಿ ದಾಳಿ ಸಾಮಾನ್ಯ:

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಕೆಲ ಮುಖಂಡರ ಮನೆಗಳ ಮೇಲೆ ನಡೆದಿರುವ ಐಟಿ ದಾಳಿಯ ಹಿಂದೆ ನನ್ನ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ. ನಾನಿನ್ನು ಗೆದ್ದು ಸಂಸದಳಾಗಿಲ್ಲ. ಹೀಗಿರುವಾಗ ಐಟಿ ದಾಳಿ ನಡೆಸುವಷ್ಟುಅಧಿಕಾರ ನನಗಿದೆಯೇ ಎಂದು ಪ್ರಶ್ನೆ ಮಾಡಿದ ಸುಮಲತಾ, ಎಲ್ಲಿ ಅಕ್ರಮ ಹಣ ಆಸ್ತಿ ಇದೆ ಎಂದು ಕಂಡುಬರುತ್ತದೆಯೋ ಅಲ್ಲಿ ಐಟಿ ದಾಳಿ ನಡೆಯುವುದು ಸಾಮಾನ್ಯ. ಇದು ಜನರಿಗೆ ಗೊತ್ತಾಗುತ್ತದೆ. ಆದರೆ, ಈ ಜೆಡಿಎಸ್‌ನವರಿಗೆ ಯಾಕೆ ಗೊತ್ತಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.