ಮಂಡ್ಯ, [ಮೇ.04]: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದರೂ ಮಂಡ್ಯದಲ್ಲಿ ಆರೋಪ-ಪ್ರತ್ಯಾರೋಪಗಳು ನಿಂತಿಲ್ಲ. ಮಂಡ್ಯ ಜಿಲ್ಲಾ ಕಾಂಗ್ರೆಸ್ ನ ಕೆಲ ನಾಯಕರು ಹಾಗೂ ಜೆಡಿಎಸ್ ಮುಖಂಡರ ಮಧ್ಯೆ ಮಾತಿನ ಸಮರ ಮುಂದುರಿದಿದೆ. 

ಜೆಡಿಎಸ್ ಶಾಸಕ ಸುರೇಶ್‍ ಗೌಡ ಅವರು ಮಾಜಿ ಸಂಸದೆ ರಮ್ಯಾ ಅವರನ್ನು ಮುಂದಿಟ್ಟು ರಾಜಕೀಯ ಮಾಡಿದ್ದರು. ಆಗ ತಾನು ಶಿಂಖಡಿ ರಾಜಕಾರಣ ಮಾಡುತ್ತಿದ್ದೇನೆ ಅಂತ ತಿಳಿಯಲಿಲ್ಲವೇ ಎಂದು ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಖಡಿ ರಾಜಕಾರಣ ಎಂಬ ಜೆಡಿಎಸ್ ಶಾಸಕ ಸುರೇಶ್‍ಗೌಡ ಅವರ ಹೇಳಿಕೆಗೆ ಇಂದು [ಶನಿವಾರ] ಪ್ರತಿಕ್ರಿಯೆ ನೀಡಿದ ಬೇಲೂರು ಸೋಮಶೇಖರ್ , ರಮ್ಯಾ ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ ಸುರೇಶ್‍ಗೌಡರನ್ನು ಏನೆಂದು ಕರೆಯಬೇಕು? ಜೆಡಿಎಸ್‍ನವರು ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡುತ್ತಿದ್ದಾರೆ. ಈ ರೀತಿಯ ಪದ ಬಳಕೆ ಮಾಡುವುದನ್ನು ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ಪ್ರಚಾರ ಆರಂಭದಿಂದಲೂ ಜೆಡಿಎಸ್‍ನವರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದರೂ ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಸುರೇಶ್‍ಗೌಡ ಹೇಳಿದ್ದೇನು?
ಮಂಡ್ಯ ಜಿಲ್ಲೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಓರ್ವ ಮಹಿಳೆಯನ್ನು ಮುಂದಿಟ್ಟುಕೊಂಡು ಶಿಖಂಡಿ ರಾಜಕಾರಣ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಮೂಲ ಕಾಂಗ್ರೆಸ್ಸಿಗರು ಮಾತ್ರ ಮೈತ್ರಿ ಪಾಲನೆ ಮಾಡಿದ್ದಾರೆ. ಇತ್ತೀಚೆಗೆ ಪಕ್ಷ ಸೇರಿದವರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕ ಸುರೇಶ್‍ಗೌಡ ಹೇಳಿದ್ದರು.