ಹಾಸನ: ಕಾಂಗ್ರೆಸ್ ಮಾಜಿ ಸಚಿವ ಎ. ಮಂಜು ಬಿಜೆಪಿ ಸೇರಲು ಸಿದ್ಧವಾಗಿದ್ದು, ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಹಾಸನದಿಂದ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸದಿದ್ದರೆ ಮೈತ್ರಿ ಅಭ್ಯರ್ಥಿ ಸ್ಪರ್ಧಿಸಿದರೆ ಬೆಂಬಲ ನೀಡುವುದಿಲ್ಲವೆಂದು ಈಗಾಗಲೇ ಘೋಷಿಸಿರು ಮಂಜು ಅವರು, ಬಿಜೆಪಿಗೆ ಸೇರುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಈಗಾಗಲೇ ಮೂರ್ನಾಲ್ಕು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಈಗಾಗಲೇ ಮಂಜು ಅವರೂ ಕೇಸರಿ ಪಡೆ ಸೇರುವ ಬಗ್ಗೆ ಸೂಚನೆ ನೀಡಿದ್ದು, ಹಾಸನದ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದಿದ್ದಾರೆ. ಆದರೂ, ಕಾರ್ಯಕರ್ತರ ಅಭಿಪ್ರಾಯಕ್ಕೆ ಬದ್ಧನಾಗಿರುತ್ತೇನೆಂದು ಸ್ಪಷ್ಟಪಡಿಸಿದ್ದಾರೆ.

'ಈಗಲೂ ಬೇಕಿದ್ರೆ ದೇವೇಗೌಡರು ಸ್ಪರ್ಧಿಸಲಿ. ಆದರೆ, ಅವರು ಮೈತ್ರಿ ಬಳಸಿಕೊಂಡು ರಾಜಕೀಯವಾಗಿ ಕುಟುಂಬವನ್ನ ಅಸ್ಥಿತ್ವ ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಬಿಟ್ಟರೆ ರಾಜ್ಯ, ದೇಶ, ಜಿಲ್ಲೆಯ ಹಿತ ಏನೂ ಇಲ್ಲ ಎನ್ನುವ ನೋವಿದೆ. ಅನುಭವ ಇಲ್ಲದೇ ಏಕಾ ಏಕಿ ಹೆಡ್ಮಾಸ್ಟರ್ ಆಗೋಕೆ ಹೋದ್ರೆ ಜನರು ಒಪ್ಪುವುದಿಲ್ಲ,' ಎಂದು ಪ್ರಜ್ವಲ್ ರೇವಣ್ಣ ಸ್ಪರ್ಧೆಯನ್ನು ಪರೋಕ್ಷವಾಗಿ ವಿರೋಧಿಸಿದರು.

'ರಾಜಕಾರಣ ನಿಂತ ನೀರಲ್ಲ. 1991ರಲ್ಲಿ ದೇವೇಗೌಡರು ನಮ್ಮ ಸಹಕಾರದಿಂದ ಸಂಸದರಾಗಿದ್ದರು. ನಾವು ಅವರಿಗೆ ಸಹಾಯ ಮಾಡಿದ್ದೀವಿ,' ಎಂದೂ ಹೇಳಿದರು.