Asianet Suvarna News Asianet Suvarna News

ಅನಂತ್‌ ಹೆಗಡೆಗೆ ಟಿಕೆಟ್‌ ತಪ್ಪಿಸಲು ರಾಜ್ಯ ಬಿಜೆಪಿ ಯತ್ನ?

ಅನಂತ್‌ ಹೆಗಡೆಗೆ ಟಿಕೆಟ್‌ ತಪ್ಪಿಸಲು ರಾಜ್ಯ ಬಿಜೆಪಿ ಯತ್ನ?| ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಮುಜುಗರ| ವಿಧಾನಸಭೆ ಚುನಾವಣೆಯಲ್ಲೂ ಹೆಗಡೆ ಹೇಳಿಕೆಯಿಂದಲೇ ಹಿನ್ನಡೆ: ಬಿಜೆಪಿ ನಂಬಿಕೆ

State BJP objects to allot ticket to Anant Kumar Hegde from Uttara Kannada Lok Sabha constituency
Author
Bangalore, First Published Mar 19, 2019, 10:30 AM IST

ಬೆಂಗಳೂರು[ಮಾ.19]: ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷವನ್ನು ಮುಜುಗರಕ್ಕೊಳಪಡಿಸುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರ ವಿರುದ್ಧ ಇದೀಗ ಬಿಜೆಪಿಯ ರಾಜ್ಯ ನಾಯಕರು ತಿರುಗಿ ಬಿದ್ದಿದ್ದಾರೆ.

ಅನಂತಕುಮಾರ್‌ ಹೆಗಡೆ ಅವರು ದಲಿತರ ಬಗ್ಗೆ, ಸಂವಿಧಾನದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳಿಂದಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸುಮಾರು 15ರಿಂದ 20 ಕ್ಷೇತ್ರಗಳಲ್ಲಿ ಸೋಲಬೇಕಾಯಿತು. ಹೀಗಾಗಿ, ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್‌ ನೀಡುವುದು ಬೇಡ ಎಂಬ ಬೇಡಿಕೆಯನ್ನು ರಾಜ್ಯ ನಾಯಕರು ವರಿಷ್ಠರ ಮುಂದಿಡಲಿದ್ದಾರೆ.

ಅಲ್ಲದೆ, ಯಾವುದೇ ಕಾರಣಕ್ಕೂ ಅನಂತಕುಮಾರ್‌ ಹೆಗಡೆ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ರಾಜ್ಯವ್ಯಾಪಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಬೇಡ ಎಂಬ ಅಭಿಪ್ರಾಯವೂ ಹಿರಿಯ ನಾಯಕರಿಂದ ವ್ಯಕ್ತವಾಗಿದೆ.

ಭಾನುವಾರ ರಾತ್ರಿ ದೆಹಲಿಗೆ ತೆರಳುವ ಮುನ್ನ ನಡೆದ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆಯಲ್ಲಿ ಅನಂತಕುಮಾರ್‌ ಹೆಗಡೆ ಕಾರ್ಯವೈಖರಿ ಬಗ್ಗೆ ಅನೇಕ ನಾಯಕರು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

ಈ ಕಾರಣಕ್ಕಾಗಿಯೇ ಅನಂತಕುಮಾರ್‌ ಹೆಗಡೆ ಅವರಿಗೆ ಈ ಬಾರಿ ಟಿಕೆಟ್‌ ನೀಡುವುದು ಬೇಡ. ಅವರು ಹಿರಿಯ ಸಂಸದರಾಗಿರಬಹುದು. ಆದರೆ, ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷಕ್ಕೆ ಧಕ್ಕೆ ಉಂಟು ಮಾಡಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಬದಲು ಕ್ಷೇತ್ರದಲ್ಲಿ ಜನಾನುರಾಗಿಯಾಗಿರುವ ಪಕ್ಷದ ಮತ್ತೊಮ್ಮ ಮುಖಂಡ ಡಾ.ಜಿ.ಜಿ.ಹೆಗಡೆ ಅವರನ್ನು ಕಣಕ್ಕಿಳಿಸುವುದು ಸೂಕ್ತ ಎಂಬ ಒತ್ತಾಯವನ್ನು ಹಲವು ನಾಯಕರು ಸಭೆಯಲ್ಲಿ ಪ್ರಸ್ತಾಪಿಸಿದರು ಎನ್ನಲಾಗಿದೆ.

ಅಂತಿಮವಾಗಿ ಈ ವಿಷಯವನ್ನು ನೇರವಾಗಿ ಪಕ್ಷದ ವರಿಷ್ಠರ ಬಳಿಯೇ ಪ್ರಸ್ತಾಪಿಸಿ ಒತ್ತಡ ಹಾಕುವುದು ಸೂಕ್ತ ಎಂಬ ನಿಲವಿಗೆ ಬಂದ ರಾಜ್ಯ ನಾಯಕರು ದೆಹಲಿಗೆ ತೆರಳಿದರು. ಆದರೆ, ಪಕ್ಷದ ಹೈಕಮಾಂಡ್‌ ಕೇಂದ್ರ ಸಚಿವ ಮತ್ತು ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿರುವ ಅನಂತಕುಮಾರ್‌ ಹೆಗಡೆ ಅವರನ್ನು ಸುಲಭವಾಗಿ ಬಿಟ್ಟು ಕೊಡುವ ಬಗ್ಗೆ ಅನುಮಾನವಿದೆ.

Follow Us:
Download App:
  • android
  • ios