ನಾರಾಯಣ ಹೆಗಡೆ, ಕನ್ನಡಪ್ರಭ

ಹಾವೇರಿ[ಏ.11]: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ತಾವು ಕರ್ತವ್ಯ ನಿರ್ವಹಿಸುವ ಮತಗಟ್ಟೆಯ ಇವಿಎಂನಲ್ಲೇ ಮತದಾನಕ್ಕೆ ಅವಕಾಶ ನೀಡುವ ವ್ಯವಸ್ಥೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಆರಂಭಿಸಲಾಗುತ್ತಿದೆ. ಇದರಿಂದ ಹಾವೇರಿ ಕ್ಷೇತ್ರದ ಮತದಾರರಾಗಿರುವ 3866 ಚುನಾವಣಾ ಸಿಬ್ಬಂದಿಗೆ ಅನುಕೂಲವಾಗಲಿದೆ.

ಚುನಾವಣಾ ಸಿಬ್ಬಂದಿಗೆ ಪೋಸ್ಟಲ್‌ ಬ್ಯಾಲೆಟ್‌ ನೀಡುವ ವ್ಯವಸ್ಥೆ ಇಷ್ಟುವರ್ಷ ನಡೆಯುತ್ತಿತ್ತು. ಆದರೆ, ಈ ಬಾರಿ ಇಡಿಸಿ(ಎಲೆಕ್ಷನ್‌ ಡ್ಯೂಟಿ ಸರ್ಟಿಫಿಕೇಟ್‌) ನೀಡಲಾಗುತ್ತಿದೆ. ಅದನ್ನು ತಾವು ಕರ್ತವ್ಯ ನಿಯೋಜಿಸುವ ಮತಗಟ್ಟೆಅಧಿಕಾರಿಗೆ ತೋರಿಸಿ ಮತಯಂತ್ರದ ಮೂಲಕವೇ ಹಕ್ಕು ಚಲಾಯಿಸಬಹುದಾಗಿದೆ. ಆದರೆ, ಆ ಸಿಬ್ಬಂದಿ ಹಾವೇರಿ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು.

ಇದ್ದಲ್ಲೇ ಮತ ಹಾಕಿ:

ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಮತ ಚಲಾವಣೆಯ ಪ್ರಮಾಣ ಪ್ರತಿ ಚುನಾವಣೆಯಲ್ಲೂ ಕಡಿಮೆಯಾಗುತ್ತಿತ್ತು. ನೌಕರ ವರ್ಗದವರೇ ಮತ ಚಲಾಯಿಸುವುದಿಲ್ಲ ಎಂಬ ಆರೋಪ ಕೇಳಿಬರುತ್ತಿತ್ತು. ಪೋಸ್ಟಲ್‌ ಬ್ಯಾಲೆಟ್‌ ಮೂಲಕ ಮತದಾನ ಮಾಡಲು ನೌಕರರು ಹೆಚ್ಚಿನ ಆಸಕ್ತಿ ತೋರುತ್ತಿರಲಿಲ್ಲ. ಆದ್ದರಿಂದ ಎನ್‌ಐಸಿಯಿಂದ (ನ್ಯಾಶನಲ್‌ ಇನ್ಫಾರ್ಮೇಟಿಕ್‌ ಸೆಂಟರ್‌) ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಚುನಾವಣೆಗೆ ಜಿಲ್ಲೆಯಲ್ಲಿ 6588 ಸಿಬ್ಬಂದಿ ನಿಯೋಜಿಸಲಾಗಿದ್ದು, ಈ ಪೈಕಿ 3866 ಸಿಬ್ಬಂದಿಗೆ ಇಡಿಸಿ ವ್ಯವಸ್ಥೆಯನ್ನು ಎನ್‌ಐಸಿ ತಂತ್ರಾಂಶದ ಸಹಾಯದಿಂದ ಮಾಡಲಾಗಿದೆ.

ಸಿಬ್ಬಂದಿಯ ಮತದಾರರ ಗುರುತಿನ ಚೀಟಿ ಸಂಖ್ಯೆ ಆಧಾರದ ಮೇಲೆ ಮೊದಲೇ ಭರ್ತಿ ಮಾಡಿದ ಅರ್ಜಿ ನಮೂನೆ 12ಎ (ಇಡಿಸಿ ಕೋರಿಕೆ ಪತ್ರ), ಅರ್ಜಿ ನಮೂನೆ 12(ಪೋಸ್ಟಲ್‌ ಬ್ಯಾಲೆಟ್‌ ಕೋರಿಕೆ ಪತ್ರ) ಸಿಬ್ಬಂದಿಗೆ ನೀಡಲಾಗಿದೆ. ಮಾಹಿತಿ ಖಾತ್ರಿ ಪಡಿಸಿ ಸಿಬ್ಬಂದಿ ಸಹಿ ಮಾಡಿದ ನಂತರ ತಂತ್ರಾಂಶದಲ್ಲಿ ತಯಾರಿಸಿದ ಇಡಿಸಿಯನ್ನು ನೀಡಲಾಗುತ್ತದೆ. ಒಂದೊಮ್ಮೆ ಬೇರೆ ಕ್ಷೇತ್ರದ ಅಭ್ಯರ್ಥಿಗಳಿದ್ದರೆ ಪೋಸ್ಟಲ್‌ ಬ್ಯಾಲೆಟ್‌ ಮೂಲಕ ಮತದಾನ ಮಾಡಬಹುದು.

ಅದೇ ಕ್ಷೇತ್ರದವರಾಗಿರಬೇಕು:

ಚುನಾವಣಾ ಕರ್ತವ್ಯಕ್ಕೆ ನಿಯೋಜಿತವಾಗಿರುವ ಸಿಬ್ಬಂದಿ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯವರಾಗಿದ್ದರೆ ಮಾತ್ರ ತಾವು ಕಾರ್ಯನಿರ್ವಹಿಸುವ ಮತಗಟ್ಟೆಯಲ್ಲಿ ಮತ ಹಾಕಬಹುದು. ಮಸ್ಟರಿಂಗ್‌ ಕೇಂದ್ರದಿಂದ ಹೊರಡುವ ವೇಳೆಯಲ್ಲೇ ಚುನಾವಣಾಧಿಕಾರಿಗಳಿಂದ ಮತಗಟ್ಟೆಸಿಬ್ಬಂದಿಗೆ ಇಡಿಸಿ ನೀಡಲಾಗುತ್ತದೆ. ಮತ ಹಾಕುವ ಸಿಬ್ಬಂದಿ ಪಟ್ಟಿಯನ್ನು ಸಂಬಂಧಪಟ್ಟಮತಗಟ್ಟೆಅಧಿಕಾರಿಗೂ ನೀಡಲಾಗುತ್ತದೆ. ಇದರಿಂದ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಸಿಬ್ಬಂದಿಗೆ ಮತ ಹಾಕಲು ಅನುಕೂಲವಾಗಲಿದೆ. ಬೇರೆ ಕ್ಷೇತ್ರದ ಸಿಬ್ಬಂದಿ ನಿಯೋಜಿತವಾಗಿದ್ದರೆ ಅವರಿಗೆ ಈ ಹಿಂದಿನಂತೆಯೇ ಪೋಸ್ಟಲ್‌ ಬ್ಯಾಲೆಟ್‌ ನೀಡಲಾಗುತ್ತದೆ.

ಸಮಸ್ಯೆಯೇನಿತ್ತು?:

ಚುನಾವಣಾ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದರೂ, ಅದು ಕಡ್ಡಾಯವಿಲ್ಲ. ಅಲ್ಲದೇ ಇದರ ಕುರಿತು ಸರಿಯಾದ ಮಾಹಿತಿ ಸಕಾಲಕ್ಕೆ ಸಿಗುತ್ತಿಲ್ಲ. ಚುನಾವಣೆ ಕುರಿತು ತರಬೇತಿ ನೀಡುವಾಗಲೂ ಮತದಾನದ ಬಗ್ಗೆ ಮಾಹಿತಿ ನೀಡುವುದಿಲ್ಲ. ಖುದ್ದು ಆಸಕ್ತಿವಹಿಸಿ ಹೆಸರು ನೋಂದಾಯಿಸಿದರೂ ಸ್ಪಂದಿಸುತ್ತಿಲ್ಲ. ನಾವು ಎಲ್ಲೋ ಕೆಲಸ ಮಾಡುತ್ತಿರುತ್ತೇವೆ. ಅಂಚೆ ಮತಪತ್ರಗಳನ್ನು ಸಕಾಲದಲ್ಲಿ ತಲುಪಿಸುವುದಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದರು. ಆದರೆ, ಈಗ ಎನ್‌ಐಸಿ ರೂಪಿಸಿರುವ ತಂತ್ರಾಂಶದ ಮೂಲಕ ಇಡಿಸಿ ನೀಡಿ ಅದೇ ಮತಗಟ್ಟೆಯಲ್ಲಿ ಮತದಾನಕ್ಕೆ ಅವಕಾಶ ಒದಗಿಸಿರುವುದರಿಂದ ಅನುಕೂಲಕರವಾಗಲಿದೆ. ಅಲ್ಲದೇ ಮತದಾನ ಪ್ರಮಾಣ ಹೆಚ್ಚಳಕ್ಕೂ ಇದು ಸಹಕಾರಿಯಾಗುವ ನಿರೀಕ್ಷೆ ಹೊಂದಲಾಗಿದೆ.

ಮತ ಚಲಾಯಿಸದ ಸಿಬ್ಬಂದಿ:

ಮತದಾನ ಮಾಡುವಂತೆ ಸರ್ಕಾರಿ ನೌಕರರೇ ಎಲ್ಲ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಾರೆ. ಆದರೆ ಅದೇ ಸಿಬ್ಬಂದಿ ಮತದಾನ ಪ್ರಕ್ರಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ವಿಪರ್ಯಾಸವಾಗಿತ್ತು. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಕಾರ್ಯಕ್ಕೆ ಹಾವೇರಿ ಜಿಲ್ಲೆಯಲ್ಲಿ 8,304 ನಿಯೋಜನೆಗೊಂಡಿದ್ದ ಸಿಬ್ಬಂದಿಯಲ್ಲಿ 910 ಸಿಬ್ಬಂದಿ ಮಾತ್ರ ಅಂಚೆ ಮೂಲಕ ಮತದಾನ ಮಾಡಿದ್ದರು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ 9,156 ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗಿದ್ದರು. ಅದರದಲ್ಲಿ ಕೇವಲ 5,805 ಸಿಬ್ಬಂದಿ ಮಾತ್ರ ಅಂಚೆ ಮತದಾನ ಮಾಡಿದ್ದರು. ಉಳಿದವರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.