‘ರಾಮಾಯಣ ಹಾಗೂ ಮಹಾಭಾರತದಲ್ಲಿ ಹಿಂಸಾಚಾರವೇ ವಿಜೃಂಭಿಸುತ್ತದೆ’| ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅಭಿಮತ| ಹಿಂದೂ ಧರ್ಮದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಎಂದಿದ್ದ ಸಾಧ್ವಿ ಪ್ರಜ್ಞಾ| ಬಿಜೆಪಿ ಸಮಾಜ ಒಡೆಯುತ್ತಿದೆ ಎಂದ ಸೀತಾರಾಂ ಯೆಚೂರಿ| ‘ಬಿಜೆಪಿಗೆ ಚುನವಣೆ ಬಂದಾಗ ರಾಮ ಮಂದಿರ ನೆನಪಾಗುತ್ತದೆ’|
ನವದೆಹಲಿ(ಮೇ.03):ಹಿಂದೂ ಧರ್ಮದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಎಂಬ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿರುಗೇಟು ನೀಡಿದ್ದಾರೆ.
ಹಿಂದೂ ಧರ್ಮ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತದಲ್ಲಿ ಹಿಂಸಾಚಾರದ ಘಟನೆಗಳೇ ತುಂಬಿವೆ ಎಂದು ಯೆಚೂರಿ ಟೀಕಿಸಿದ್ದು, ಬಿಜೆಪಿ ಸಮಾಜವನ್ನು ಒಡೆಯುವಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದಾರೆ.
ದೇಶದ ಇತಿಹಾಸ ಕೆದಕಿದರೆ ರಾಜ ಮಹಾರಾಜರ ಯುದ್ಧದ ಸಂಗತಿಗಳೇ ಅನಾವರಣಗೊಳ್ಳುತ್ತವೆ ಎಂದಿರುವ ಯೆಚೂರಿ, ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿರುವವರು ತಮಗೆ ಮನಸ್ಸಿಗೆ ಬಂದಂತೆ ಧರ್ಮವನ್ನು ತಿರುಚುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಹಿಂದೂತ್ವ ಅಜೆಂಡಾ , ಸಂವಿಧಾನದ 35 ಎ ಹಾಗೂ 370 ವಿಧಾನ ರದ್ದು, ರಾಮ ಮಂದಿರ ನಿರ್ಮಾಣ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಸಾದ್ವಿ ಪ್ರಜ್ಞಾ ಇಂತಹ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಯೆಚೂರಿ ಟೀಕಿಸಿದ್ದಾರೆ.
ಬಿಜೆಪಿ ಎಲ್ಲಾ ರಂಗದಲ್ಲೂ ವಿಫಲವಾಗಿದ್ದು, ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಜನರ ಪ್ರಜಾಸತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಯೆಚೂರಿ ಗಂಭೀರ ಆರೋಪ ಮಾಡಿದರು.
