Asianet Suvarna News Asianet Suvarna News

ಚೆಲುವರಾಯಸ್ವಾಮಿ ಮನವೊಲಿಸಲು ಮುಂದಾದ ಸಿದ್ದರಾಮಯ್ಯ

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಮಂಡ್ಯದಲ್ಲಿ ಕೆಲ ಕಾಂಗ್ರೆಸಿಗರು ಮೈತ್ರಿ ಅಭ್ಯರ್ಥಿಗೆ ಬೆಂಬಲ ನಿರಾಕರಿಸಿದ್ದು, ಇವರ ಮನವೊಲಿಕೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ. 

Siddaramaiah Will Meet Mandya Congress Leader
Author
Bengaluru, First Published Apr 5, 2019, 11:01 AM IST

ಬೆಂಗಳೂರು :  ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗಿನ ವೈಯಕ್ತಿಕ ಮುನಿಸಿನಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಇಳಿಯದೇ ದೂರ ಉಳಿದಿರುವ ಕಾಂಗ್ರೆಸ್‌ ನಾಯಕರು ಹಾಗೂ ಕುಮಾರಸ್ವಾಮಿ ಅವರ ನಡುವೆ ಹೊಂದಾಣಿಕೆ ಮೂಡಿಸುವ ಪ್ರಯತ್ನಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಪ್ರಯತ್ನದ ಫಲವಾಗಿ ಯುಗಾದಿ ಹಬ್ಬದ ದಿನ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕುಮಾರಸ್ವಾಮಿ ಹಾಗೂ ಅವರೊಂದಿಗೆ ಮುನಿಸು ಹೊಂದಿರುವ ಚೆಲುವರಾಯಸ್ವಾಮಿ ಅವರ ನಡುವೆ ಮುಖಾಮುಖಿ ಭೇಟಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೈತ್ರಿಯ ಹೊರತಾಗಿಯೂ ಕಾಂಗ್ರೆಸ್‌ ನಾಯಕರಾದ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಗಣಿಗ ರವಿ, ಕೆ.ಬಿ.ಚಂದ್ರಶೇಖರ್‌ ಅವರಂತಹ ನಾಯಕರು ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೆ ಇಳಿದಿಲ್ಲ. ಈ ನಾಯಕರೊಂದಿಗೆ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿರುವ ಸಿದ್ದರಾಮಯ್ಯ, ಹೈಕಮಾಂಡ್‌ ನಿರ್ದೇಶನವಿರುವ ಕಾರಣ ಪ್ರಚಾರಕ್ಕೆ ತೆರಳುವಂತೆ ಸೂಚನೆಯನ್ನು ನೀಡಿದ್ದಾರೆ.

ಆದರೆ, ಜೆಡಿಎಸ್‌ನವರು ನಮ್ಮನ್ನು ಸಭೆ ಸಮಾರಂಭಗಳಿಗೆ ಆಹ್ವಾನಿಸುತ್ತಿಲ್ಲ. ಪ್ರಚಾರಕ್ಕೆ ಬರುವಂತೆ ಕರೆಯುತ್ತಿಲ್ಲ. ಹೀಗಿರುವಾಗ ನಾವು ಹೇಗೆ ಹೋಗುವುದು ಎಂದು ಈ ನಾಯಕರು ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಕೆಪಿಸಿಸಿಯ ಮೂಲಕ ಜೆಡಿಎಸ್‌ ಮುಖಂಡರ ಗಮನಕ್ಕೆ ತಂದಾಗ, ನಮ್ಮನ್ನು ಒಳಗೊಳಗೆ ವಿರೋಧಿಸುತ್ತಿರುವವರ ಮನೆ ಬಾಗಿಲಿಗೆ ಹೋಗುವುದಿಲ್ಲ ಎಂಬ ಉತ್ತರ ಬಂದಿದೆ ಎನ್ನಲಾಗಿದೆ. ಇದರಿಂದಾಗಿ ಎರಡು ಬಣಗಳ ನಡುವೆ ಹೊಂದಾಣಿಕೆ ಮೂಡಿಸಲು ಸಿದ್ದರಾಮಯ್ಯ ಅವರು ಶನಿವಾರ ತಮ್ಮ ನಿವಾಸದಲ್ಲಿ ಚೆಲುವರಾಯಸ್ವಾಮಿ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಸಭೆ ಆಯೋಜಿಸಿದ್ದಾರೆ ಎನ್ನಲಾಗಿದೆ. ಈ ಸಭೆಗೆ ಈ ನಾಯಕರು ಬರುವುದು ಇನ್ನೂ ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios