ಮಂಡ್ಯ[ಏ.08]: ಲೋಕಸಭಾ ಚುನಾವಣಾ ಕಣ ರಂಗೇರಿದೆ. ಕರ್ನಾಟಕದಲ್ಲೂ ಪಕ್ಷಗಳ ನಡುವಿನ ಜಿದ್ದಾಜಿದ್ದಿ ತಾರಕಕ್ಕೇರಿದೆ. ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹಾಗೂ ಸಿಎಂ ಪುತ್ರ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವಿನ ಸ್ಪರ್ಧೆ ಇದನ್ನು ಹೈಪೋಲ್ಟೇಜ್ ಕ್ಷೇತ್ರವನ್ನಾಗಿ ಮಾರ್ಪಾಡು ಮಾಡಿದೆ. ಆದರೀಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಂಟ್ರಿ ಕೊಡುತ್ತಿರುವುದು ಲೇಟೆಸ್ಟ್ ಅಪ್ಡೇಟ್ಸ್.

ಹೌದು ಈ ಹಿಂದೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಬರುವುದಿಲ್ಲ ಎನ್ನುವ ಮೂಲಕ ಭಾರೀ ಚರ್ಚೆ ಹುಟ್ಟು ಹಾಕಿದ್ದರು. ಸಿದ್ದರಾಮಯ್ಯರ ಈ ನಿರ್ಧಾರಕ್ಕೆ ಕಾರಣವೇನಾಗಿರಬಹುದು ಎಂಬ ಅನುಮಾನಗಳೂ ಮೂಡಿಸಿದ್ದವು. ಹೀಗಿರುವಾಗಲೇ ವಿಡಿಯೋ ಸಂದೇಶವೊಂದರ ಮೂಲಕ ತಾನು ಮಂಡ್ಯಕ್ಕೆ ಎಂಟ್ರಿ ನೀಡುವುದನ್ನು ಖಚಿತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಈ ವಿಡಿಯೋವನ್ನು ಸಿಎಂ ಕುಮಾರಸ್ವಾಮಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ  'ಕಾಂಗ್ರೆಸ್-#JDS ಮೈತ್ರಿಕೂಟದ ಸಮನ್ವಯ ಸಮಿತಿ ಅಧ್ಯಕ್ಷ ಶ್ರೀ ಸಿದ್ದರಾಮಯ್ಯನವರು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಹಾಗೂ ಮಂಡ್ಯದಲ್ಲಿ ನಿಖಿಲ್ ರನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿರುವುದು ಸಂದರ್ಭೋಚಿತವಾಗಿದೆ.ಉಭಯ ಪಕ್ಷಗಳ ಕಾರ್ಯಕರ್ತರು ಎಲ್ಲ 28ಕ್ಷೇತ್ರಗಳಲ್ಲೂ ಒಗ್ಗಟ್ಟಿನಿಂದ ನಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸೋಣ' ಎಂದೂ ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಸಿದ್ದರಾಮಯ್ಯನವರು ಏಪ್ರಿಲ್ 12ರಂದು ದೇವೇಗೌಡ ಹಾಗೂ ತಾನು ಒಟ್ಟಿಗೆ ಪ್ರಚಾರ ಮಾಡುತ್ತೇವೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ, ನಿಖಿಲ್ ಗೆಲ್ಲಿಸಬೇಕೆಂದು ಮನವಿ ಮಾಡಿರುವ ಸದ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.