ನವದೆಹಲಿ(ಮಾ.24): ಪಾಟ್ನಾ ಸಾಹೀಬ್ ಕ್ಷೇತ್ರಕ್ಕೆ ರವಿಶಂಕರ್ ಪ್ರಸಾದ್ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೇ ಶತ್ರುಘ್ನ ಸಿನ್ಹಾ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಬಿಜೆಪಿ ನಾಯಕತ್ವದ ವಿರುದ್ಧ ಕಿಡಿಕಾರುತ್ತಿದ್ದ ಶತೃಘ್ನ ಸಿನ್ಹಾ ಇದೀಗ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಅಕ್ಷರಶಃ ಬಂಡಾಯ ನಾಯಕರಾಗಿ ಮಾರ್ಪಟ್ಟಿದ್ದು, ನೇರವಾಗಿಯೇ ಮೋದಿ ಮತ್ತು ಅಮಿತ್ ಶಾ ನಾಯಕತ್ವವನ್ನು ತೀವ್ರವಾಗಿ ಟೀಕಿಸಲು ಪ್ರಾರಂಭಿಸಿದ್ದಾರೆ.

ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಉದ್ದೇಶಪೂರ್ವಕವಾಗಿಯೇ ಅಭ್ಯರ್ಥಿಗಳ ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ನಿಜಕ್ಕೂ ಇದು ಅತ್ಯಂತ ಕಳವಳಕಾರಿ ಮತ್ತು ನೋವಿನ ಸಂಗತಿ ಎಂದು ಶತೃಘ್ನ ಸಿನ್ಹಾ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿನ್ಹಾ, ಯಾವುದೇ ಕಾರಣಕ್ಕೂ ಅಮಿತ್ ಶಾ ಹಿರಿಯ ನಾಯಕ ಅಡ್ವಾಣಿ ಅವರಿಗೆ ಸರಿಸಮಾನರಾಗಲು ಸಾಧ್ಯವೇ ಇಲ್ಲ. ಅಡ್ವಾಣಿ ಅವರನ್ನು ಉದ್ದೇಶ ಪೂರ್ವಕವಾಗಿ ತೆಗೆದು ಹಾಕಲಾಗಿದ್ದು, ಇದು ಬಿಜೆಪಿಯ ನಾಚಿಕೆ ಇಲ್ಲದ ನಡೆಯಾಗಿದೆ ಎಂದು ಟೀಕಿಸಿದ್ದಾರೆ.