ನವದೆಹಲಿ(ಮೇ.29): ನರೇಂದ್ರ ಮೋದಿ ಬಿಜೆಪಿಯ ಉತ್ಪನ್ನವಾಗಿದ್ದು, ಮೋದಿ ಹೆಸರನ್ನು ಬಿಜೆಪಿ ಚೆನ್ನಾಗಿ ಮಾರುಕಟ್ಟೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ತರೂರ್ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಮೋದಿ ಎಂಬ ಉತ್ಪನ್ನವನ್ನು ಮಾರುಕಟ್ಟೆ ಮಾಡುವಲ್ಲಿ ಬಿಜೆಪಿ ಎತ್ತಿದ ಕೈ ಎಂದು ತರೂರ್ ಹೇಳಿದ್ದಾರೆ.

ಮೋದಿ ಹೆಸರನ್ನು ಮಾರುಕಟ್ಟೆ ಮಾಡುವ ಮೂಲಕ ಬಿಜೆಪಿ ಎರಡನೇ ಬಾರಿ ಯಶಸ್ವಿಯಾಗಿರುವುದು ಸುಳ್ಳಲ್ಲ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಮೋದಿ ಅಲೆ ಇರುವುದನ್ನು ತರೂರ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡಿರುವ ತರೂರ್, ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರ್ಕಾರದ ವೈಫಲ್ಯ, ರಫೆಲ್ ಹಗರಣ, ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿದ್ದ ನ್ಯಾಯ್ ಪರಿಕಲ್ಪನೆಯನ್ನು ಜನರಿಗೆ ತಲುಪಿಸುವಲ್ಲಿ ಪಕ್ಷ ವಿಫಲವಾಗಿದ್ದೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

ಅಲ್ಲದೇ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ವಿರೋಧಿಸಿರುವ ತರೂರ್, ಪಕ್ಷವನ್ನು ಮತ್ತೆ ಬೇರು ಮಟ್ಟದಿಂದ ಕಟ್ಟಿ ಬೆಳೆಸಲು ರಾಹುಲ್ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.