ಬೆಳಗಾವಿ[ಏ.20]: ಬಿಜೆಪಿ ಆಪರೇಶನ್‌ ಕಮಲ ಮಾಡುತ್ತಿದ್ದು, ಒಬ್ಬೊಬ್ಬ ಶಾಸಕನಿಗೆ .20 ಕೋಟಿ ಆಫರ್‌ ನೀಡುತ್ತಿದೆ. ನಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೇ ಹೆಬ್ಬಾಳಕರ್‌ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿಯ ಆಪರೇಷನ್‌ ಕಮಲದಿಂದಾಗಿ ಸಮ್ಮಿಶ್ರ ಸರ್ಕಾರದಲ್ಲಿರುವ ಶಾಸಕರು ಮುಂಬೈಗೆ ಮತ್ತು ದೆಹಲಿಗೆ ಓಡಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಬೆಳಗಾವಿ ಲೋಕಸಭಾ ಕೇತ್ರದಿಂದ ಮೂರು ಬಾರಿ ವಿವಿಧ ಅಲೆಯಲ್ಲಿ ಆಯ್ಕೆಯಾಗಿರುವ ಬಿಜೆಪಿಯ ಸುರೇಶ್‌ ಅಂಗಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ರೈತರ ಜಮೀನಿಗೆ ಕೈ ಹಾಕಿ ರಿಂಗ್‌ರೋಡ್‌ ನಿರ್ಮಾಣ ಯೋಜನೆಗೆ ಮುಂದಾಗಿದ್ದಾರೆ. ಗಾಳಿಯಲ್ಲಿ ಆರಿಸಿ ಬಂದವರಿಗೆ ಸಾಮಾನ್ಯ ಜನರ ಹಾಗೂ ರೈತರ ಸಮಸ್ಯೆಗಳು ಅರ್ಥವಾಗುವುದಿಲ್ಲ ಎಂದು ಹರಿಹಾಯ್ದರು.