ನವದೆಹಲಿ[ಮೇ.12]: ಲೋಕಸಭಾ ಚುನಾವಣೆಯ 6ನೇ ಹಂತದಡಿಯಲ್ಲಿ ಭಾನುವಾರದಂದು ದೆಶದ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ನಡುವೆ ಕೇಂದ್ರ ಸಚಿವೆ ಹಾಗೂ ಸುಲ್ತಾನ್ ಪುರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ಹಾಗೂ ಮಹಾಮೈತ್ರಿಯ ಅಭ್ಯರ್ಥಿ ಸೋನು ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದೆ. ಸುದ್ದಿ ಸಂಸ್ಥೆ ANI ವಿಡಿಯೋ ಒಂದನ್ನು ಬಿಡುಗಡೆಗೊಳಿಸಿದ್ದು, ಇದರ ಅನ್ವಯ ಮನೇಕಾ ಗಾಂಧಿಯವರು ಸೋನು ಸಿಂಗ್ ಬೆಂಬಲಿಗರು ಮತದಾರರಿಗೆ ಬೆದರಿಕಯೊಡ್ಡಿರುವುದಾಗಿ ಆರೋಪಿಸಿದ್ದಾರೆ.

ಈ ವಿಡಿಯೋದಲ್ಲಿ ಆಕ್ರೋಶಿತರಾದ ತನ್ನ ಬೆಂಬಲಿಗರನ್ನು ಸೋನು ಸಿಂಗ್ ಸಮಾಧಾನಪಡಿಸಲು ಯತ್ನಿಸುತ್ತಿರುವುದನ್ನು ನೊಡಬಹುದಾಗಿದೆ. ಆರಂಭದಲ್ಲಿ ಮನೇಕಾ ಗಾಂಧಿ., ಸೋನು ಸಿಂಗ್ ಬಳಿ ಮಾತನಾಡುತ್ತಾರೆ, ಬಳಿಕ ಸೋನು ಸಿಂಗ್ ತನ್ನ ಸಮರ್ಥಕರನ್ನು ಸಮಾಧಾನಪಡಿಸಿ ಅಲ್ಲಿಂದ ದೂರ ತೆರಳುವಂತೆ ಹೇಳುತ್ತಾರೆ. ಹೀಗಾಗಿ ಬೆಂಬಲಿಗರು ತಮ್ಮ ನಾಯಕನ ಮಾತಿನಂತೆ ಮರು ಮಾತನಾಡದೇ ಅಲ್ಲಿಂದ ತೆರಳುತ್ತಾರೆ.

ಇಂದು ಭಾನುವಾರ ನಡೆಯುತ್ತಿರುವ ಆರನೇ ಹಂತದ ಮತದಾನದಲ್ಲಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಒಟ್ಟು ಏಳು ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಇಂದಿನ ಚುನಾವಣೆಯಲ್ಲಿ ಕೆಂದ್ರ ಸಚಿವರಾದ ರಾಧಾ ಮೋಹನ್ ಸಿಂಗ್, ಹರ್ಷವರ್ಧನ್ ಹಾಗೂ ಮನೇಕಾ ಗಾಂಧಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕರಾದ ದಿಗ್ವಜಯ್ ಸಿಂಗ್ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾರ ಭವಿಷ್ಯ ನಿರ್ಧಾರವಾಗಲಿದೆ.