ನವದೆಹಲಿ[ಮಾ.15]: ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ 21 ವಿಪಕ್ಷಗಳು ಮನವಿಯನ್ನು ಆಧರಿಸಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟೀಸ್ ನೀಡಿದೆ. ಮಾರ್ಚ್ 25ರಂದು ನಡೆಯಲಿರುವ ಮುಂದಿನ ಚುನಾವಣೆಯಲ್ಲಿ ಆಯೋಗದ ಓರ್ವ ಅಧಿಕಾರಿ ನ್ಯಾಯಾಲಯಕ್ಕೆ ಹಾಜರಾಗಿ ವಿವಿಪ್ಯಾಟ್ ಹಾಗೂ ಇವಿಎಂ ಕುರಿತಾಗಿ ಎದ್ದಿರುವ ಸವಾಲುಗಳಿಗೆ ಉತ್ತರಿಸುವಂತೆ ತಿಳಿಸಿದೆ. 

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿ ಸಿಎಂ ಕೇಜ್ರಿವಾಲ್, ಅಖಿಲೇಶ್ ಯಾದವ್, ಕೆ.ಸಿ ವೇಣುಗೋಪಾಲ್, ಶರದ್ ಪವಾರ್ ಸೇರಿದಂತೆ 21 ವಿಪಕ್ಷಗಳು ಸಲ್ಲಿಸಿರುವ ಈ ಅರ್ಜಿಯಲ್ಲಿ ಪ್ರತಿಯೊಂದು ಕ್ಷೇತ್ರದ ವಿದ್ಯುನ್ಮಾನ ಮತಯಂತ್ರಗಳ ಶೇ.50ರಷ್ಟು ವಿಪಿಪ್ಯಾಟ್‌ ಸ್ಲಿಪ್‌ ಗಳ ಎಣಿಕೆ ಮಾಡುವಂತೆ ಮನವಿ ಮಾಡಿಕೊಂಡಿವೆ.

ಈ ಹಿಂದೆಯೂ ಇವಿಎಂ ಬಳಕೆ ವಿಚಾರವಾಗಿ ಅಸಮಾಧಾನ ವ್ಯಕ್ತವಾಗಿತ್ತು. ಅಲ್ಲದೇ ಬ್ಯಾಲೆಟ್ ಪೇಪರ್ ಬಳಕೆಯನ್ನೇ ಮತ್ತೆ ಆರಂಭಿಸಬೇಕೆಂಬ ಕೂಗು ಎದ್ದಿತ್ತು. ಹೀಗಿದ್ದರೂ ಚುನಾವಣಾ ಆಯೋಗ ಮಾತ್ರ ಇವಿಎಂ ಸುರಕ್ಷಿತವಾಗಿದ್ದು, ಯಾವುದೇ ಕಾಲಕ್ಕೂ ಮತಪತ್ರಗಳ ಬಳಕೆ ಮಾಡುವುದಿಲ್ಲ ಎನ್ನುವ ಮೂಲಕ ಎಲ್ಲಾ ಬೇಡಿಕೆ, ಆಗ್ರಹಗಳನ್ನು ತಳ್ಳಿ ಹಾತ್ತು.

ಸದ್ಯ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಆಯೋಗಕ್ಕೆ ನೋಟಿಸ್ ನೀಡಿರುವುದು ಭಾರೀ ಸದ್ದು ಮಾಡಿದ್ದು, ವಿಪಕ್ಷಗಳ ಬೇಡಿಕೆ ಈಡೇರುತ್ತಾ ಕಾದು ನೊಡಬೇಕಿದೆ.