ನವದೆಹಲಿ[ಮೇ.11]: ಲೋಕಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಸಾವಿರಾರು ಕೋಟಿ ರು. ಹರಿದುಬಂದಿದೆ. ಈ ವರ್ಷದ ಮಾಚ್‌ರ್‍, ಏಪ್ರಿಲ್‌ನಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ 3,622 ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯ ಅಡಿ ಕೇಳಲಾದ ಪ್ರಶ್ನೆಯಿಂದ ತಿಳಿದುಬಂದಿದೆ.

ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ವಿಹಾರ್‌ ದುರ್ವೆ ಎನ್ನುವವರು ಕೇಳಿದ ಪ್ರಶ್ನೆಗೆ ಎಸ್‌ಬಿಐ ಈ ಉತ್ತರ ನೀಡಿದೆ. ಮಾಚ್‌ರ್‍ನಲ್ಲಿ 1365 ಕೋಟಿ ರು. ಮೌಲ್ಯದ ಬಾಂಡ್‌ ಮಾರಾಟವಾಗಿದ್ದರೆ, ಏಪ್ರಿಲ್‌ನಲ್ಲಿ 2256 ಕೋಟಿ ರು. ಚುನಾವಣಾ ಬಾಂಡ್‌ ಬಿಕರಿಯಾಗಿದೆ. ಅಂದರೆ, ಏಪ್ರಿಲ್‌ನಲ್ಲಿ ಚುನಾವಣಾ ಬಾಂಡ್‌ ಖರೀದಿ ಶೇ.65.21ರಷ್ಟುಏರಿಕೆಯಾಗಿದೆ. ಮುಂಬೈನಲ್ಲಿ 694 ಕೋಟಿ ರು., ಕೋಲ್ಕತಾದಲ್ಲಿ 417 ಕೋಟಿ ರು., ದೆಹಲಿಯಲ್ಲಿ 408 ಕೋಟಿ ರು. ಮತ್ತು ಹೈದರಾಬಾದ್‌ನಲ್ಲಿ 338 ಕೋಟಿ ರು.ಮೊತ್ತದ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ.

ಏನಿದು ಚುನಾವಣಾ ಬಾಂಡ್‌?

ರಾಜಕೀಯ ಪಕ್ಷಗಳು ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕವೇ ಹಣ ಸಂಗ್ರಹಿಸಲು 2018ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದೆ. ಹಣಕಾಸು ಸಚಿವಾಲಯದ ಅಧಿಸೂಚನೆಯ ಬಳಿಕ ಎಸ್‌ಬಿಐನ ನಿರ್ದಿಷ್ಟಶಾಖೆಗಳಲ್ಲಿ 1000 ರು., 10,000 ರು., 1 ಲಕ್ಷ ರು., 10 ಲಕ್ಷ ಹಾಗೂ 1 ಕೋಟಿ ರು. ಮೌಲ್ಯದ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಎಸ್‌ಬಿಐನ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದಾಗಿದೆ. ದಾನಿಗಳು ತಮ್ಮ ಆಯ್ಕೆಯ ಪಕ್ಷಕ್ಕೆ ಬಾಂಡ್‌ಗಳನ್ನು ದೇಣಿಗೆ ನೀಡಬಹುದು. ಈ ಬಾಂಡ್‌ 15 ದಿನಗಳ ವಾಯಿದೆ ಹೊಂದಿರುತ್ತದೆ. ಅಷ್ಟರೊಳಗೆ ರಾಜಕೀಯ ಪಕ್ಷ ಅದನ್ನು ಬ್ಯಾಂಕ್‌ ಖಾತೆ ಮೂಲಕ ನಗದಾಗಿಸಿಕೊಳ್ಳಬೇಕು.