ಘಟಪ್ರಭಾ :  ಮೈತ್ರಿ ಸರ್ಕಾರದ ಬಗ್ಗೆ ಮುನಿಸಿಕೊಂಡು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತಟಸ್ಥರಾಗಿರುವ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಅವರು ಬಿಜೆಪಿಗೆ ಪಕ್ಷಾಂತರ ಆಗುವ ಸಾಧ್ಯತೆ ಬಗ್ಗೆ ಅವರ ಸಹೋದರಾದ ಸಚಿವ ಸತೀಶ್‌ ಜಾರಕಿಹೊಳಿ ಅವರೇ ಸುಳಿವು ನೀಡಿದ್ದಾರೆ. ನಾನು ಶಾಸಕ ರಮೇಶ ಜಾರಕಿಹೊಳಿ ಅವರ ಮನಸು ಬದಲಾಯಿಸುವ ಪ್ರಯತ್ನ ಈಗ ಕೈಮೀರಿ ಹೋಗಿದೆ. ಒಂದು ವೇಳೆ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದರೆ ಗೋಕಾಕ ಕ್ಷೇತ್ರದಲ್ಲಿ ಲಖನ್‌ ಜಾರಕಿಹೊಳಿಯವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗುತ್ತಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಡಾ.ಸಾಧುನವರ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ರಮೇಶ ಜಾರಕಿಹೊಳಿ ಈಗಾಗಲೇ ಕಾಂಗ್ರೆಸ್‌ ಪಕ್ಷದಿಂದ ದೂರವಿದ್ದು, ಪಕ್ಷದ ಪರವಾಗಿ ಪ್ರಚಾರ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಈ ವಿಚಾರ ಈಗಾಗಲೇ ಹೈಕಮಾಂಡ್‌ ಗಮನಕ್ಕೂ ತಲುಪಿದೆ ಎಂದರು.

ಕಾರಣ ಗೊತ್ತಿಲ್ಲ: ರಮೇಶ ಯಾವ ಕಾರಣಕ್ಕೆ ಪಕ್ಷ ಬಿಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಜಾರಕಿಹೊಳಿ ಕುಟುಂಬದಲ್ಲಿ ರಾಜಕೀಯ ಗುರುವಾಗಿದ್ದರೂ ಈಗ ನನ್ನ ಕೈಮೀರಿದೆ. ಗೋಕಾಕದಲ್ಲಿ ಕಾಂಗ್ರೆಸ್‌ ಪಕ್ಷ ಬಲಪಡಿಸುವ ಉದ್ದೇಶದಿಂದ ಪಕ್ಷವನ್ನು ಸಂಘಟಿಸುತ್ತಿದ್ದೇನೆ. ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇ ಎನ್ನುವುದು ಸುಳ್ಳು. ರಾಜಕೀಯದಿಂದ ಎಲ್ಲರೂ ಬೇರೆ ಬೇರೆಯಾಗಿದ್ದೇವೆ. ಇದರಿಂದ ಜಾರಕಿಹೊಳಿ ಅಭಿಮಾನಿಗಳಲ್ಲಿ ಗೊಂದಲವಾಗಿರುವುದು ನಿಜ. ಹಾಗೆಯೇ ಮುಂದೆ ಗೋಕಾಕ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ಮಧ್ಯೆ ಸ್ಪರ್ಧೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕೆಲವು ಹಿರಿಯ ಕಾರ್ಯಕರ್ತರು ರಮೇಶ ಜಾರಕಿಹೊಳಿಯವರ ಮನವೊಲಿಸಬೇಕೆಂದು ಸತೀಶ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಅವರು ಈ ವಿಷಯ ನಮ್ಮ ಕೈಮೀರಿದ್ದು, ಕಾರ್ಯಕರ್ತರೇ ರಮೇಶ ಜಾರಕಿಹೊಳಿ ಅವರಿಗೆ ಬುದ್ಧಿ ಹೇಳಬೇಕು. ಈ ಚುನಾವಣೆ ಸೆಮಿಫೈನಲ್‌ ಆಗಿದ್ದು, ಮುಂದಿನ ದಿನಗಳಲ್ಲಿ ಫೈನಲ್‌ ನಡೆಯಲಿದೆ. ನಮಗೆ ಆರು ತಿಂಗಳು ಕಾಲಾವಕಾಶ ಸಿಕ್ಕರೆ ಕ್ಷೇತ್ರದ ಚಿತ್ರಣ ಬದಲಿಸುತ್ತೇವೆ ಎಂದರು.