ಒಬ್ರು ಮೋದಿಯನ್ನು ದುರ್ಯೋಧನ ಅಂತಾರೆ, ಮತ್ತೊಬ್ರು ಔರಂಗಜೇಬ್ ಅಂತಾರೆ| ಪ್ರಧಾನಿ ಮೋದಿ ಆಧುನಿಕ ಔರಂಗಜೇಬ್ ಎಂದ ಕಾಂಗ್ರೆಸ್ ನಾಯಕ| ವಾರಾಣಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಂಜಯ್ ನಿರುಪಮ್| ವಾರಾಣಸಿಯಲ್ಲಿ ಮೋದಿ ಅಸಂಖ್ಯ ದೇವಸ್ಥಾನ ಕೆಡವಿದ್ದಾರೆ ಎಂದ ಸಂಜಯ್| ಕಾಶಿ ವಿಶ್ವನಾಥ್ ಕಾರಿಡಾರ್ ಪ್ರಸ್ತಾಪಿಸಿದ ಸಂಜಯ್ ನಿರುಪಮ್|
ವಾರಾಣಸಿ(ಮೇ.08): ಅವರಿವರಿಗೆಲ್ಲಾ ಪ್ರಬುದ್ಧ ರಾಜಕಾರಣದ ಪಾಠ ಹೇಳಿಕೊಡುತ್ತಿರುವ ಕಾಂಗ್ರೆಸ್ ನಾಯಕರು, ತಮ್ಮ ನಾಲಿಗೆ ಮೇಲಿನ ಹಿಡಿತ ಮಾತ್ರ ಕಳೆದುಕೊಳ್ಳುತ್ತಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಬಾಯಿಗೆ ಬಂದಿದ್ದನ್ನು ಮಾತನಾಡುವುದನ್ನೇ ಕಾಯಕ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು, ಮೋದಿಯನ್ನು ಒಮ್ಮೆ ದುರ್ಯೋಧನ ಎಂದರೆ ಮತ್ತೊಮ್ಮೆ ಔರಂಗಜೇಬ್ ಅಂತಿದ್ದಾರೆ.
ತಮ್ಮ ಬಂಡವಾಳಶಾಹೀ ಲಾಭಕ್ಕಾಗಿ ಪ್ರಧಾನಿ ಮೋದಿ ವಾರಾಣಸಿಯ ದೇವಸ್ಥಾನಗಳನ್ನೆಲ್ಲಾ ನಾಶ ಮಾಡಿದ್ದಾರೆ. ಹೀಗಾಗಿ ಮೋದಿ ಆಧುನಿಕ ಔರಂಗಜೇಬ್ ಇದ್ದಂತೆ ಎಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಗಂಭೀರ ಆರೋಪ ಮಾಡಿದ್ದಾರೆ.
ವಾರಾಣಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಂಜಯ್ ನಿರುಪಮ್, ಮೊಘಲ್ ದೊರೆ ಔರಂಗಜೇಬ್ ದೇವಸ್ಥಾನಗಳನ್ನು ನಾಶ ಮಾಡಿದ ರೀತಿಯಲ್ಲೇ ಅಭಿವೃದ್ಧಿ ಹೆಸರಲ್ಲಿ ಮೋದಿ ಕೂಡ ನಗರದ ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದರು.
ವಾರಾಣಿಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಗಾಗಿ ಕೆಲವು ಪುರಾತನ ಕಟ್ಟಡಗಳು ಮತ್ತು ದೇವಸ್ಥಾನಗಳನ್ನು ಒಡೆದು ಹಾಕಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ಸಂಜಯ್ ನಿರುಪಮ್ ಪ್ರಧಾನಿ ಮೋದಿ ಅವರನ್ನು ಆಧುನಿಕ ಔರಂಗಜೇಬ್ ಎಂದು ಕಿಡಿಕಾರಿದ್ದಾರೆ.
ನಿನ್ನಯಷ್ಟೇ(ಮೇ.07)ಅಂಬಾಲಾದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಿಯಾಂಕಾ ಗಾಂಧಿ, ಮೋದಿ ಅವರಲ್ಲಿ ದುರ್ಯೋಧನನಿಗಿದ್ದ ಅಹಂಕಾರವಿದ್ದು, ಅದನ್ನು ಅಡಗಿಸುವ ಕಾಲ ಕೂಡಿ ಬಂದಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
