ಉನ್ನಾವೋ(ಮಾ.16): ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌,  2019ರ ಲೋಕಸಭೆ ಚುನಾವಣೆ ನಂತರ ದೇಶದಲ್ಲಿ ಚುನಾವಣೆಯೇ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಸುನಾಮಿ ಎಷ್ಟು ತೀವ್ರವಾಗಿದೆ ಎಂದರೆ, 2019ರ ಬಳಿಕ ಚುನಾವಣೆಯ ಅಗತ್ಯವೇ ಇರುವುದಿಲ್ಲ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯುವುದಿಲ್ಲ ಎಂದು ಸಾಕ್ಷಿ ಮಹಾರಾಜ್ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ತಾವೊಬ್ಬ ಸನ್ಯಾಸಿಯಾಗಿದ್ದು, ದೇಶದ ಮುಂದಿನ ಭವಿಷ್ಯ ಏನು ಅಂತ ತಮಗೆ ಗೊತ್ತಿದೆ ಎಂದು ಸಾಕ್ಷಿ ಮಹಾರಾಜ್ ಹೆಳಿದ್ದರೆ. ಅದರಂತೆ 2019ರ ಚುನಾವಣೆ ಬಳಿಕ 2024ರಲ್ಲಿ ಮತ್ತೆ ಚುನಾವಣೆಯ ಅಗತ್ಯವೇ ಬಾರದು ಎಂದು ತಮ್ಮ ಅನಿಸಿಕೆ ಎಂದು ಅವರು ನುಡಿದಿದ್ದಾರೆ.

ಇದೇ ಏಪ್ರಿಲ್ 11ರಿಂದ ಒಟ್ಟು 7 ಹಂತಗಳಲ್ಲಿ ಲೋಕಸಭೆಗೆ ದೇಶಾದ್ಯಂತ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಮೇ 23 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಣೆಯಾಗಲಿದೆ.