ಭೋಪಾಲ್(ಏ.19): 26/11 ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಉಗ್ರ ನಿಗ್ರಹ ದಳ(ATS) ಅಧಿಕಾರಿ ಹೇಮಂತ್ ಕರ್ಕರೆ, ನನ್ನ ಶಾಪದಿಂದಾಗಿ ತಮ್ಮ ಕರ್ಮದ ಫಲ ಉಂಡಿದ್ದಾರೆ ಎಂದು ಭೋಪಾಲ್ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.

ಹುತಾತ್ಮ ಹೇಮಂತ್ ಕರ್ಕರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ 2008ರ ಮಾಲೇಂಗಾವ್ ಸ್ಪೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ನನ್ನ ಶಾಪ ಹಾಗೂ ಅವರ ಕರ್ಮದಿಂದಾಗಿ ಕರ್ಕರೆ ಸತ್ತಿದ್ದಾರೆ ಎಂದು ಹೇಳಿದ್ದಾರೆ.

ಹೇಮಂತ್ ಕರ್ಕರೆ ತನಿಖಾಧಿಕಾರಿಯಾಗಿದ್ದಾಗ ಹಿಂದೂ ಸಂಘಟನೆಯ ಹಲವು ಸದಸ್ಯರನ್ನು ಬಂಧಿಸಿದ್ದರು. ಅಲ್ಲದೇ ಬಂಧನದಲ್ಲಿದ್ದಾಗ ಅವರು ನನಗೆ ಕಿರುಕುಳ ನೀಡಿದ್ದರು ಎಂದು ಸಾಧ್ವಿ ಆಕ್ರೋಶ ಹೊರಹಾಕಿದ್ದಾರೆ.

ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಹೀಗಾಗಿ ಬಿಡುವಂತೆ ಮನವಿ ಮಾಡಿದರೂ, ನಿನ್ನ ವಿರುದ್ಧ ಸಾಕ್ಷಿ ತರುವುದಾಗಿ ಹೇಮಂತ್ ಬೆದರಿಕೆ ಹಾಕಿದ್ದರು. ಅವತ್ತೇ ನಾನು ಹೇಮಂತ್ ಕರ್ಕರೆಗೆ ಶಾಪ ಹಾಕಿದ್ದೆ ಎಂದು ಸಾಧ್ವಿ ಹೇಳಿದ್ದಾರೆ.

ಇನ್ನು ಪ್ರಜ್ಞಾ ಸಿಂಗ್ ಹೇಳಿಕೆಯನ್ನು ಖಂಡಿಸಿರುವ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯತ್ ಸಿಂಗ್, ಬಿಜೆಪಿ ಅಭ್ಯರ್ಥಿ ಪ್ರಾಮಾಣಿಕ ಮತ್ತು ಹುತಾತ್ಮ ಅಧಿಕಾರಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.