ರಾಮ್‌ನಗರ್(ಮೇ.21): ಲೋಕಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೇ ಬಹುತೇಕ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಮಧ್ಯೆ ಮತ್ತೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಯಲ್ಲಿ ಹಲವು ಚಟುವಟಿಕೆಗಳು ಗರಿಗೆದರಿವೆ. ಅದರಂತೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜೀ ಜೋಷಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆ.

ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಇಬ್ಬರೂ ನಾಯಕರು, ಸರ್ಕಾರ ರಚನೆಯ ಸಾಧ್ಯತೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಆದರೆ ಇಬ್ಬರೂ ನಾಯಕರು ಪ್ರಧಾನಿ ಹುದ್ದೆ ಕುರಿತೂ ಮಾತುಕತೆ ನಡೆಸಿರುವ ಸಾಧ್ಯತೆ ಇದೆ ಎಂಬ ಊಹಾಪೋಹ ಕೇಳಿ ಬರುತ್ತಿದ್ದು, ಆರ್‌ಎಸ್‌ಎಸ್‌ಗೆ ಹೆಚ್ಚು ಆಪ್ತರಾಗಿರುವ ನಿತಿನ್ ಗಡ್ಕರಿ ಅವರನ್ನು ಆರ್‌ಎಸ್‌ಎಸ್ ಪ್ರಾನಿ ಹುದ್ದೆಗೆ ಆಯ್ಕೆ ಮಾಡಲಿದೆಯೇ ಎಂಬ ಗುಸುಗುಸು ಕೇಳಿ ಬರುತ್ತಿದೆ.