ಬೆಂಗಳೂರು[ಮಾ.27]: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬ ವದಂತಿ ಹಬ್ಬಿಸಿದ್ದು ಬಿಜೆಪಿ ವರಿಷ್ಠರ ತಂತ್ರದ ಭಾಗವಾಗಿತ್ತು ಎಂದು ಗೊತ್ತಾಗಿದೆ.

ಪಕ್ಷ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರಕಟಿಸಿರಲಿಲ್ಲ. ಎರಡನೆಯ ಪಟ್ಟಿಯಲ್ಲಿ ಹೆಸರು ಪ್ರಕಟಗೊಳ್ಳಲಿದೆ ಎಂಬ ಮಾತನ್ನು ರಾಜ್ಯ ನಾಯಕರು ಆಡುತ್ತಿದ್ದ ವೇಳೆಯೇ ಪ್ರಧಾನಿ ಮೋದಿ ಅವರು ಕರ್ನಾಟಕದಿಂದ ಸ್ಪರ್ಧಿಸಬಹುದು ಎಂಬ ವದಂತಿಯನ್ನು ಜಾಣತನದಿಂದ ತೇಲಿ ಬಿಡಲಾಯಿತು. ನಂತರ ಅದು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎನ್ನುವಷ್ಟರ ಮಟ್ಟಿಗೆ ಹೋಯಿತು.

ಈ ಬಗ್ಗೆ ಸಾಕಷ್ಟು ಚರ್ಚೆಯೂ ಆಯಿತು. ಖುದ್ದು ಪಕ್ಷದ ರಾಜ್ಯ ನಾಯಕರಿಗೂ ಬೆಂಗಳೂರು ದಕ್ಷಿಣದಿಂದ ಮೋದಿ ಅಥವಾ ಹೈ ಪ್ರೊಫೈಲ್‌ ವ್ಯಕ್ತಿಯೊಬ್ಬರು ಕಣಕ್ಕಿಳಿಯಬಹುದು ಎಂಬ ಮಾತನ್ನು ರಾಜ್ಯ ನಾಯಕರು ಬಹಿರಂಗವಾಗಿಯೇ ಹೇಳತೊಡಗಿದರು. ರಾಷ್ಟ್ರೀಯ ಘಟಕದಿಂದ ಹಾಗಂತಲೇ ಮಾಹಿತಿ ರವಾನೆಯಾಗಿತ್ತು. ಆಗಲೂ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ತಪ್ಪಿಸುವ ಹುನ್ನಾರ ನಡೆದಿದೆ ಎಂಬುದು ರಾಜ್ಯ ಬಿಜೆಪಿ ನಾಯಕರಿಗೆ ಅಥವಾ ಕಾರ್ಯಕರ್ತರಿಗೆ ಗೊತ್ತಾಗಲೇ ಇಲ್ಲ. ಅಂತಿಮವಾಗಿ ಸೋಮವಾರ ಸತ್ಯಾಂಶ ಹೊರಬಿತ್ತು.