ನವದೆಹಲಿ[ಮೇ.21]: ವಿದ್ಯುನ್ಮಾನ ಮತಯಂತ್ರಗಳ ಬಳಕೆ ಆರಂಭವಾದಾಗಿನಿಂದ ಮಧ್ಯಾಹ್ನದ ಹೊತ್ತಿಗೆಲ್ಲಾ ಅಧಿಕೃತವಾಗಿ ಘೋಷಣೆಯಾಗುತ್ತಿದ್ದ ಲೋಕಸಭೆ ಚುನಾವಣೆ ಫಲಿತಾಂಶ ಈ ಬಾರಿ 5ರಿಂದ 6 ತಾಸು ವಿಳಂಬವಾಗಲಿದೆ.

ಲೋಕಸಭೆ ಚುನಾವಣೆಯ ಎಲ್ಲ ಕ್ಷೇತ್ರಗಳಲ್ಲೂ ಈ ಸಲ ವಿವಿಪ್ಯಾಟ್‌ ಬಳಕೆಯಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಕುರಿತು ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್‌ ಮತಗಳನ್ನೂ ತಾಳೆ ಹಾಕಬೇಕಾಗಿದೆ. ಅದು ಪೂರ್ಣಗೊಂಡ ಬಳಿಕವಷ್ಟೇ ಅಧಿಕೃತ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ವಿವಿಪ್ಯಾಟ್‌ಗಳ ಮತ ಎಣಿಕೆಗೆ ಸಮಯ ಹಿಡಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಲಿದೆ. ಮೊದಲು ಅಂಚೆ ಮತಗಳ ಎಣಿಕೆ ಪೂರ್ಣಗೊಳ್ಳಲಿದೆ. ನಂತರ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಆರಂಭವಾಗಲಿದೆ. ಅದಾದ ನಂತರ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 5 ವಿವಿಪ್ಯಾಟ್‌ ಯಂತ್ರಗಳನ್ನು ಲಾಟರಿ ಮೂಲಕ ಎತ್ತಿ ಎಣಿಕೆ ಆರಂಭಿಸಲಾಗುತ್ತದೆ.

ವಿದ್ಯುನ್ಮಾನ ಯಂತ್ರಗಳಲ್ಲಿನ ಮತಗಳನ್ನು ಎಣಿಕೆ ಮಾಡುವಾಗ ಪ್ರತಿ ಸುತ್ತಿನಲ್ಲೂ ಯಾರು ಮುನ್ನಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಲಿದೆ. ಅಧಿಕೃತ ಫಲಿತಾಂಶ ಪ್ರಕಟವಾಗುವುದು ತಡವಾದರೂ, ಯಾರು ಮುನ್ನಡೆಯಲಿದ್ದಾರೆ ಎಂಬ ಚಿತ್ರಣ ಈ ಹಿಂದಿನಂತೆಯೇ ಸಿಗಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.