ನವದೆಹಲಿ[ಮೇ.06]: ರಫೇಲ್‌ ಖರೀದಿ ವಿಷಯದಲ್ಲಿ ದೊಡ್ಡ ಹಗರಣದ ನಡೆದಿದೆ. ಅನಿಲ್‌ ಅಂಬಾನಿ ಒಡೆತನದ ಕಂಪನಿಗೆ ಪ್ರಧಾನಿ ಮೋದಿ 30000 ಕೋಟಿ ರು. ಲಾಭ ಮಾಡಿಕೊಟ್ಟಿದ್ದಾರೆ ಎಂದು ಪದೇ ಪದೇ ಆರೋಪಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ, ರಿಲಯನ್ಸ್‌ ಗ್ರೂಪ್‌ ಭಾನುವಾರ ತಿರುಗೇಟು ನೀಡಿದೆ.

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅನಿಲ್‌ ಒಡೆತನದ ರಿಲಯನ್ಸ್‌ ಕಂಪನಿ, ‘ರಫೇಲ್‌ ವಿಷಯ ಸಂಬಂಧ ಮಾಡುತ್ತಿರುವ ಆರೋಪಗಳಿಗೆ ರಾಹುಲ್‌ ಗಾಂಧಿ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ಇಂಥ ಆರೋಪಗಳಿಗೆ ಯಾವುದೇ ಆಧಾರವೂ ಇಲ್ಲ. ಇದರ ಹೊರತಾಗಿಯೂ ನಮ್ಮ ಕಂಪನಿ ವಿರುದ್ಧ ಮಿಥ್ಯಾರೋಪಗಳನ್ನು, ಉದ್ದೇಶಪೂರ್ವಕ ತಪ್ಪು ಮಾಹಿತಿಗಳನ್ನು ಜನರಿಗೆ ರವಾನಿಸಲಾಗುತ್ತಿದೆ ಎಂದಿದ್ದಾರೆ.

ಇಷ್ಟೇ ಅಲ್ಲದೇ ವಾಸ್ತವವಾಗಿ ಯುಪಿಎ ಸರ್ಕಾರ ಅಧಿಕಾರಲ್ಲಿದ್ದ 2002-2014ರ ಅವಧಿಯಲ್ಲಿ ರಿಲಯನ್ಸ್‌ ಗ್ರೂಪ್‌ಗೆ ಇಂಧನ, ಟೆಲಿಕಾಂ, ರಸ್ತೆ, ಮೆಟ್ರೋ ಸೇರಿದಂತೆ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರು. ಮೊತ್ತದ ಯೋಜನೆ ಗುತ್ತಿಗೆ ನೀಡಿತ್ತು. ಯಾರನ್ನು 10 ವರ್ಷ ಬೆಂಬಲಿಸಲಾಗಿತ್ತೋ, ಅವರನ್ನೇ ಈಗ ಭ್ರಷ್ಟಉದ್ಯಮಿ ಎನ್ನಲಾಗುತ್ತಿದೆ. ಈ ಕುರಿತು ಸ್ವತಃ ರಾಹುಲ್‌ರಿಂದ ನಾವು ಸ್ಪಷ್ಟನೆ ಬಯಸುತ್ತೇವೆ ಎಂದು ಹೇಳಿದೆ.