ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್‌ನ ಅತ್ಯಂತ ಕಳಪೆ ಸಾಧನೆಯ ಪರಿಣಾಮ ಪ್ರಮುಖ ಹುದ್ದೆಯಲ್ಲಿರುವ ನಾಯಕರ ತಲೆದಂಡ ಬಹುತೇಕ ಖಚಿತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ತಮ್ಮ ಸ್ಥಾನಮಾನವನ್ನು ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಿದೆ. 

ಈ ಚುನಾವಣೆ ಸಿದ್ದರಾಮಯ್ಯ ಮುಂದಾಳತ್ವದಲ್ಲೇ ಎದುರಿ ಸಿದ್ದರೂ, ಈ ಹಂತದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಚ್ಯುತಿ ತರುವ ಸ್ಥಿತಿಯಲ್ಲಿ ಖುದ್ದು ಕಾಂಗ್ರೆಸ್ ಹೈಕಮಾಂಡ್ ಇಲ್ಲ. 

ಹೀಗಾಗಿ, ಸೋಲಿನ ಹೊಣೆಯನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಸ್ತುವಾರಿ ಅವರ ಹಣೆಗೆ ಕಟ್ಟುವ ಪ್ರಯತ್ನ ನಡೆಯಲಿದೆ ಎಂದೇ ಹೇಳಲಾಗುತ್ತಿದೆ.  ಈ ಸೂಕ್ಷ್ಮವನ್ನು ಅರಿತೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೈಕಮಾಂಡ್ ಸೂಚಿಸಿದರೆ ಸೋಲಿನ ಹೊಣೆ ಹೊತ್ತು ಸ್ಥಾನಕ್ಕೆ  ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿಕೆಯನ್ನು ನೀಡಿದ್ದಾರೆ. 

ಇನ್ನು  ರಾಜ್ಯ ಉಸ್ತುವಾರಿ ವೇಣುಗೋಪಾಲ್ ಧೋರಣೆ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಅಪಾರ ಸಿಟ್ಟಿದೆ. ಈ ನಾಯಕರು ಉಸ್ತುವಾರಿ ಬದಲಾವಣೆಗೆ ಹೈಕಮಾಂಡನ್ನು ಆಗ್ರಹಿಸುವ ಎಲ್ಲಾ ಸಾಧ್ಯತೆಯಿದ್ದು, ಇವರ ಬದಲಿಗೆ ಚೆಲ್ಲಕುಮಾರ್ ಅವರಂತಹ ನಾಯಕರು ಮತ್ತೆ ರಾಜ್ಯಕ್ಕೆ ಉಸ್ತುವಾರಿಯಾಗಿ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.