ನವದೆಹಲಿ[ಏ.22]: ಉತ್ತರಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಾವು ಸ್ಪರ್ಧಿಸುವ ಕುರಿತಾದ ರಹಸ್ಯವನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಹಾಗೆಯೇ ಉಳಿಸಿಕೊಂಡಿದ್ದಾರೆ. ಆದರೆ ಪಕ್ಷದ ಅಧ್ಯಕ್ಷರು ಸೂಚಿಸಿದರೆ ಕಣಕ್ಕಿಳಿಯಲು ತಾವು ಸಿದ್ಧ ಎಂದು ಘೋಷಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಮಹತ್ವದ್ದಾಗಿರುವ ಉತ್ತರಪ್ರದೇದಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಿದರೆ ಅದು ಕಾಂಗ್ರೆಸ್ಸಿಗರ ಉತ್ಸಾಹವನ್ನು ಮತ್ತಷ್ಟುಹೆಚ್ಚಿಸಲಿದೆ. ಇದೇ ಕಾರಣಕ್ಕಾಗಿ ಅವರನ್ನು ವಾರಾಣಸಿಯಿಂದ ಕಣಕ್ಕೆ ಇಳಿಸಲು ಕಾಂಗ್ರೆಸ್‌ ನಾಯಕರು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿತ್ತು.

ಅದರ ಬೆನ್ನಲ್ಲೇ ಭಾನುವಾರ ಸುದ್ದಿಗಾರರು, ವಾರಾಣಸಿಯಲ್ಲಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ‘ಒಂದು ವೇಳೆ ಕಾಂಗ್ರೆಸ್‌ ಅಧ್ಯಕ್ಷರು ಸೂಚಿಸಿದರೆ, ಖಂಡಿತವಾಗಿಯೂ ಸಂತೋಷದಿಂದ ಸ್ಪರ್ಧಿಸುವೆ’ ಎಂದು ಹೇಳಿದ್ದಾರೆ.

ಇತ್ತೀಚೆಗೆ ಇದೇ ಪ್ರಶ್ನೆಯನ್ನು ರಾಹುಲ್‌ಗೆ ಕೇಳಿದಾಗ, ಅವರೂ ನೇರವಾದ ಉತ್ತರ ನೀಡದೇ ಜಾರಿಕೊಂಡಿದ್ದರು.