Asianet Suvarna News Asianet Suvarna News

ಅಧಿಕಾರಕ್ಕೆ ಬಂದ ತಕ್ಷಣ ನದಿ ಜೋಡಿಸಿ: ಮೋದಿಗೆ ರಜನಿ ಮನವಿ

ಬಿಜೆಪಿ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ನದಿ ಜೋಡಣೆ ವಿಚಾರಣೆಗೆ ಬಗೆಗಿನ ಪ್ರಸ್ತಾಪವನ್ನು ನಟ ರಜನೀಕಾಂತ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇ ವೇಳೆ ಕಮಲ್ ಹಾಸನ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Rajini praises BJP manifesto for promise to link rivers
Author
Chennai, First Published Apr 10, 2019, 10:16 AM IST

ಚೆನ್ನೈ(ಏ.10): 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರಿದಲ್ಲಿ ತಾನು ನೀಡಿದ ವಾಗ್ದಾನದಂತೆ ನದಿ ಜೋಡಣೆ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ನಟ ಹಾಗೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ರಜನೀಕಾಂತ್‌ ಅವರು ಹೇಳಿದ್ದಾರೆ.

ಬಿಜೆಪಿ ಪ್ರಣಾಳಿಕೆ ‘ಪ್ರತ್ಯೇಕ ವ್ಯಕ್ತಿಯ ಸೊಕ್ಕಿನ ಧ್ವನಿ’ ಎಂದ ರಾಹುಲ್!

ಚೆನ್ನೈನಲ್ಲಿರುವ ತಮ್ಮ ನಿವಾಸದ ಎದುರು ಪತ್ರಕರ್ತರ ಜೊತೆ ಮಾತನಾಡಿದ ರಜನೀಕಾಂತ್‌ ಅವರು, ‘ಬಿಜೆಪಿ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ನದಿ ಜೋಡಣೆ ಬಗ್ಗೆ ಉಲ್ಲೇಖಿಸಿದೆ. ಅಲ್ಲದೆ, ಅದಕ್ಕಾಗಿ ಸಮಿತಿಯೊಂದನ್ನು ನೇಮಕ ಮಾಡುವುದಾಗಿಯೂ ಹೇಳಿದೆ. ಒಂದು ವೇಳೆ ಎನ್‌ಡಿಎ ಸರ್ಕಾರ ರಚನೆ ಮಾಡಿದರೆ, ಅವರು ಮೊದಲು ದೇಶದಲ್ಲಿನ ನದಿ ಜೋಡಣೆಗೆ ಮುಂದಾಗಬೇಕು,’ ಎಂದು ಪ್ರತಿಪಾದಿಸಿದರು. ಅಲ್ಲದೆ, ನದಿ ಜೋಡಣೆ ಮಾಡುವುದರಿಂದ ದೇಶದಲ್ಲಿರುವ ಅರ್ಧಕರ್ಧ ಬಡತನ ನಿರ್ಮೂಲನೆಯಾಗಿದೆ. ಕೋಟ್ಯಂತರ ಜನರು ಉದ್ಯೋಗಿಗಳಾಗಲಿದ್ದಾರೆ. ರೈತರ ಜೀವನ ಸುಧಾರಣೆಯಾಗಲಿದೆ ಎಂದು ರಜನಿ ಹೇಳಿದರು.

ಇದೇ ವರ್ಷದ ಫೆಬ್ರವರಿಯಲ್ಲಿ ತಾವು ಘೋಷಣೆ ಮಾಡಿದಂತೆ ಲೋಕಸಭೆ ಚುನಾವಣೆಯಲ್ಲಿ ನಾನಾಗಲೀ ಅಥವಾ ನಮ್ಮ ಪಕ್ಷ ಅಭ್ಯರ್ಥಿಗಳಾಗಲೀ ಕಣಕ್ಕಿಳಿಯುವುದಿಲ್ಲ. ನಮ್ಮ ಪಕ್ಷದ ಗುರಿಯೇನಿದ್ದರೂ 2021ರ ತಮಿಳುನಾಡು ವಿಧಾನಸಭೆ ಚುನಾವಣೆ ಎಂದು ಸ್ಪಷ್ಟಪಡಿಸಿದರು.

ಇನ್ನು ಕಮಲ್‌ ಹಾಸನ್‌ ನೇತೃತ್ವದ ಮಕ್ಕಳ್‌ ನೀದಿ ಮಯ್ಯಂ ಪಕ್ಷವನ್ನು ಬೆಂಬಲಿಸುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಉತ್ತರಿಸಲು ನನಗೆ ಇಷ್ಟವಿಲ್ಲ. ಇಂಥ ಪ್ರಶ್ನೆಗಳ ಮೂಲಕ ನಮ್ಮಿಬ್ಬರ ನಡುವಿನ ಸ್ನೇಹವನ್ನು ಹಾಳು ಮಾಡಬೇಡಿ ಎಂದಷ್ಟೇ ಹೇಳಿದರು.

Follow Us:
Download App:
  • android
  • ios