ಬೆಂಗಳೂರು(ಮೇ.22): ಲೋಕಸಭೆ ಚುನಾವಣೆಗಳು ಮುಗಿದು ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಾಗ ಕೆಲವರು ಮೋದಿಯೇ ಮತ್ತೆ ಪ್ರಧಾನಿ ಎಂಬ ಖುಷಿಯಲ್ಲಿದ್ದರೆ, ಮತ್ತೆ ಕೆಲವರು 2004ರ ಚುನಾವಣೋತ್ತರ ಸಮೀಕ್ಷೆಗಾದ ಗತಿಯೇ ಆಗಲಿದೆ ಎಂಬ ಆಶಾವಾದ ಹೊಂದಿದ್ದರು.

ಕಾರಣ ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ ಸ್ಪಷ್ಟ ಬಹುಮತ ನೀಡಿ ಶರಾ ಬರೆದಿವೆ. ಇದು ಪ್ರತಿಪಕ್ಷಗಳಲ್ಲಿ ಆತಂಕ ಮೂಡಿಸಿರುವುದು ಹೌದಾದರೂ, 2004ರಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾದಂತೆ ಈ ಬಾರಿಯೂ ಆಗಲಿದೆ ಎಂಬ ಸಣ್ಣ ಆಶಾಭಾವನೆ ಅವುಗಳಲ್ಲಿದೆ.

ಹಾಗಾದರೆ ನಿಜಕ್ಕೂ ಈ ಬಾರಿಯೂ 2004ರ ಚುನಾವಣೋತ್ತರ ಸಮೀಕ್ಷೆಗಾದ ಗತಿಯೇ ಆಗಲಿದೆಯೆ?. ಅಥವಾ 2004ಕ್ಕಿಂತ ಭಿನ್ನವಾದ ಪರಿಸ್ಥಿತಿ 2019ರಲ್ಲಿದೆಯೇ?. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವ ಸಾಧ್ಯತೆಗಳು ಎಷ್ಟು?. ವಿಪಕ್ಷಗಳ ಸಂಖ್ಯಾಬಲ ಎಷ್ಟಾಗಲಿದೆ? ಎಂಬುದರ ಕುರಿತು ಚೆನ್ನೈನ ಮ್ಯಾಥಮ್ಯಾಟಿಕಲ್ ಇನ್ಸಿಟ್ಯೂಟ್ ಮುಖ್ಯಸ್ಥ ರಾಜೀವ್ ಕರನಂದಿಕರ್ ತಮ್ಮದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಓವರ್ ಟು ರಾಜೀವ್ ಕರನಂದಿಕರ್:

 

2004ರಲ್ಲಿ ಏನಾಗಿತ್ತು?:

2004ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದ್ದವು. ಎನ್‌ಡಿಎಗೆ ಸ್ಪಷ್ಟ ಬಹುಮತ ಘೋಷಿಸಿದ್ದ ಚುನಾವಣೋತ್ತರ ಸಮೀಕ್ಷೆಗಳು, ವಾಜಪೇಯಿ ಮತ್ತೆ ಪ್ರಧಾನಿಯಾಗುವುದು ಖಚಿತ ಎಂದು ಸಾರಿದ್ದವು.

ಆದರೆ ಚುನಾವಣಾ ಫಲಿತಾಂಶ ಹೊರ ಬಿದ್ದಾಗ ಇಡೀ ದೇಶಕ್ಕೆ ಅಚ್ಚರಿ ಕಾದಿತ್ತು. ಕಾರಣ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ದೊರೆತು, ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿ ಆಯ್ಕೆಯಾದರು.

2019ರಲ್ಲೂ ಇಂತದ್ದೇ ಪರಿಸ್ಥಿತಿ ಮರುಕಳಿಸಲಿದೆಯಾ?:

ಇದೀಗ 2019ರ ಲೋಕಸಭೆ ಚುನಾವಣೆ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ ಎಂದು ಅಭಿಪ್ರಾಯಪಟ್ಟಿವೆ. ಆದರೆ 2004ರ ಪರಿಸ್ಥಿತಿ ಮರುಕಳಿಸಿದರೆ ಏನು ಎಂಬ ಸಣ್ಣ ಆತಂಕವೂ ಇಲ್ಲದಿಲ್ಲ.

ಆದರೆ ಯಾಕೆ ಈ ಬಾರಿ 2004ರ ಪರಿಸ್ಥಿತಿ ಮರುಕಳಿಸುವುದಿಲ್ಲ ಎಂಬುದಕ್ಕೆ ಅಂಕಿ ಅಂಶಗಳ ಸಮೇತ ಮನಗಾಣಬಹುದು. ಇದಕ್ಕಾಗಿ ಮೊದಲಿಗೆ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ವ್ಯಕ್ತಿತ್ವದ ತುಲನೆ ಮಾಡುವುದು ಅವಶ್ಯಕ.

ಎಲ್ಲರಿಗೂ ಗೊತ್ತಿದ್ದಂತೇ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಭಾರತದ ರಾಜಕಾರಣದ ಅಜಾತಶತ್ರು. ಆದರೆ ವಾಜಪೇಯಿ ಸಮಾಜದ ಕೇಲವೇ ವರ್ಗಕ್ಕೆ ಸೀಮಿತಗೊಂಡ ರಾಜಕಾರಣಿಯಾಗಿ ಉಳಿದರು. ಮೇಲ್ವರ್ಗ, ವ್ಯಾಪಾರಿ ವರ್ಗ, ಶಿಕ್ಷಿತ ಸಮುದಾಯವನ್ನಷ್ಟೇ ತಲುಪಲು ವಾಜಪೇಯಿಗೆ ಸಾಧ್ಯವಾಯಿತು.

ಆದರೆ ಚುನಾವಣೆಯಲ್ಲಿ ಬಹುವಾಗಿ ನಿರ್ಣಾಯಕವಾಗಿರುವ ಕೆಳವರ್ಗ, ಅಶಿಕ್ಷಿತ, ನಿರುದ್ಯೋಗ ಸಮುದಾಯವನ್ನು ತಲುಪುವಲ್ಲಿ ವಾಜಪೇಯಿ ವಿಫಲರಾಗಿದ್ದರು. 5 ವರ್ಷ ಉತ್ತಮ ಆಡಳಿತ ನೀಡಿದ್ದರೂ, ವಾಜಪೇಯಿ ಅಧಿಕಾರಕ್ಕೆ ಬರಲು ಸಾಧ್ಯವಾಗದ್ದಕ್ಕೆ ಇದು ಬಹುತೇಕವಾಗಿ ಕಾರಣವಾಯಿತು. ಅಲ್ಲದೇ ವಾಜಪೇಯಿ ಮತ್ತು ಬಿಜೆಪಿಯನ್ನು ಇಷ್ಟಪಡುವ ಸಮುದಾಯ ಕೂಡ ಮತಗಟ್ಟೆಗೆ ತೆರಳಿ ಮತದಾನ ಮಾಡುವಲ್ಲಿ ನಿರುತ್ಸಾಹ ತೋರಿತ್ತು ಎಂಬುದು ಸುಳ್ಳಲ್ಲ.

ಆದರೆ ನರೇಂದ್ರ ಮೋದಿ ವ್ಯಕ್ತಿತ್ವ ಇದಕ್ಕೆ ವ್ಯತಿರಿಕ್ತವಾಗಿದೆ. ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ತಮ್ಮ ಕೌಟುಂಬಿಕ ಹಿನ್ನೆಲೆಯ ಪರಿಣಾಮವಾಗಿ ಮೋದಿ ಬಹುಬೇಗನೆ ದೇಶದ ಕೆಳವರ್ಗದ ಮನೆಮಾತಾದರು. ಬಡವರ ಪರ ಅವರಿಗಿರುವ ಕಾಳಜಿ ಅವರನ್ನು ವೇಗವಾಗಿ ಜನರ ಹತ್ತಿರಕ್ಕೆ ಕೊಂಡೊಯ್ದಿದೆ.. ಹೀಗಾಗಿ ಮೋದಿ ಜೊತೆ ಜೊತೆಗೆ ಬಿಜೆಪಿ ಕೂಡ ಸಮಾಜದ ಎಲ್ಲ ವರ್ಗವನ್ನು ತಲುಪುವಲ್ಲಿ ಯಶಸ್ವಿಯಾಯಿತು.

ಇಷ್ಟೇ ಅಲ್ಲದೇ ನರೇಂದ್ರ ಮೋದಿ ಅವರ ವ್ಯಕ್ತಿತ್ವದ ಪರಿಣಾಮವಾಗಿ ಅವರಿಗೆ ಅಸಂಖ್ಯಾತ ಅಭಿಮಾನಿಗಳಿದ್ದು, ಈ ಬಾರಿ ಅವರೆಲ್ಲಾ ನಮೋಗಾಗಿ ಮತಗಟ್ಟೆಗೆ ತೆರಳಿ ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಲೇಬೇಕು ಎಂಬ ಉತ್ಸಾಹ ಅವರ ಅಭಿಮಾನಿ ಬಳಗದಲ್ಲಿ ಎದ್ದು ಕಾಣುತ್ತಿರುವುದು ಸುಳ್ಳಲ್ಲ.

ಫಲಿತಾಂಶ ಹೇಗೆ ಬರಬಹುದು?:

BJP: 250

NDA: 295 (so BJP allies 45)

INC : 75

UPA: 110 (so Congress allies 35)

Others : 137

(TMC SP, BSP, TRS, BJD, TDP, YSR Congress and Others)