ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರುತ್ತದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ವರದಿಗೆ ಹೆಚ್ಚಿನ ಮಹತ್ವ ಬೇಡ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದ್ದ ಬೆನ್ನಲ್ಲೇ, ಇದೇ ರೀತಿಯ ಸಂದೇಶವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೂಡಾ ನೀಡಿದ್ದಾರೆ.

 ಈ ಬಗ್ಗೆ ಬುಧವಾರ ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ, ‘ಈ ಮುಂದಿನ 24 ಗಂಟೆಗಳ ಕಾಲ ಬಹಳ ಮಹತ್ವದ್ದಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು ಹಾಗೂ ಕಟ್ಟೆಚ್ಚರ ವಹಿಸಬೇಕು. 

ಸತ್ಯಕ್ಕಾಗಿ ನೀವು ಹೋರಾಡುತ್ತಿದ್ದೀರಿ. ಪ್ರಚಾರಕ್ಕಾಗಿ ಮಾಡಲಾದ ನಕಲಿ ಚುನಾವಣೋತ್ತರ ಸಮೀಕ್ಷೆಗಳಿಂದ ಕಾರ್ಯಕರ್ತರು ಹತಾಶರಾಗುವುದು ಬೇಡ. ನಿಮ್ಮಲ್ಲಿ ಹಾಗೂ ಕಾಂಗ್ರೆಸ್‌ನಲ್ಲಿ ನೀವು ನಂಬಿಕೆಯಿಡಿ. ನಿಮ್ಮ ಪರಿಶ್ರಮವು ವ್ಯರ್ಥವಾಗುವುದಿಲ್ಲ. ಜೈಹಿಂದ್‌,’ ಎಂದು ಹೇಳಿದ್ದಾರೆ.