ನವದೆಹಲಿ(ಮೇ.17): ಪ್ರಧಾನಿ ಹುದ್ದೆಗೇರಿದ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ಮೋದಿ ನಡೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ತಮಗೆ ಕೇಳಲಾದ ಪ್ರಶ್ನೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ವರ್ಗಾಯಿಸಿದ ಮೋದಿ ನಡೆಯನ್ನು ರಾಹುಲ್ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಐದು ವರ್ಷಗಳ ಬಳಿಕ ನಡೆಸಿದ ಪತ್ರಿಕಾಗೋಷ್ಠಿ ಅದ್ಭುತವಾಗಿತ್ತು ಎಂದು ಅವರು ಕುಹುಕವಾಡಿದ್ದಾರೆ.

ಐದು ವರ್ಷಗಳ ಬಳಿಕ ಸಿಕ್ಕ ಪ್ರಧಾನಿಗೆ ಪ್ರಶ್ನೆ ಕೇಳಲು ಬಯಸಿದ್ದ ಪತ್ರಕರ್ತರಿಗೆ ಮೋದಿ ನಡೆ ತೀವ್ರ ನಿರಾಸೆಯುಂಟು ಮಾಡಿದೆ ಎಂದು ರಾಹುಲ್ ಹರಿಹಾಯ್ದಿದ್ದಾರೆ. ಒಂದೇ ಒಂದು ಪ್ರಶ್ನೆಗೆ ಉತ್ತರಿಸದ ಮೋದಿ, ಪತ್ರಿಕಾಗೋಷ್ಠಿಯುದ್ದಕ್ಕೂ ಲಘುವಾಗಿ ಮಾತನಾಡಿ ಕಾಲ ಕಳೆದರು ಎಂದು ಅವರು ಟೀಕಿಸಿದರು.

ಪತ್ರಕರ್ತರು ನನಗೆ ಯಾವಾಗಲೂ ಕಠಿಣ ಪ್ರಶ್ನೆಗಳನ್ನು ಕೇಳುತ್ತಾರೆ. ಕಾರಣ ದೇಶದ ಕುರಿತು ಅವರು ನನ್ನ ದೃಷ್ಟಿಕೋನವನ್ನು ತಿಳಿಯಲು ಬಯುಸತ್ತಾರೆ. ಆದರೆ ಅದೇ ಮೋದಿಗೆ ಅವರ ಬಟ್ಟೆ, ಮಾವಿನ ಹಣ್ಣಿನ ಕುರಿತು ಪ್ರಶ್ನೆ ಕೇಳುತ್ತಾರೆ. ಕಾರಣ ಮೋದಿ ದೇಶದ ಕುರಿತು ಯಾವುದೇ ದೃಷ್ಟಿಕೋನ ಹೊಂದಿಲ್ಲ ಎಂದು ಅವರಿಗೂ ಗೊತ್ತು ಎಂದು ರಾಹುಲ್ ಪ್ರಧಾನಿ ಕಾಲೆಳೆದಿದ್ದಾರೆ.

ನವದೆಹಲಿಯಲ್ಲಿ ಇಂದು ನಡೆದ ಬಿಜೆಪಿ ಪತ್ರಿಕಾಗೋಷ್ಠಿ ಬಳಿಕ ಪತ್ರಕರ್ತರು ತಮಗೆ ಕೇಳಿದ ಪ್ರಶ್ನೆಗಳನ್ನು ಪ್ರಧಾನಿ ಮೋದಿ ಅಮಿತ್ ಶಾ ಅವರಿಗೆ ವರ್ಗಾಯಿಸಿದ್ದು ಟೀಕೆಗೆ ಗುರಿಯಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.