ನವದೆಹಲಿ[ಏ.30]: ರಫೇಲ್‌ ಯುದ್ಧವಿಮಾನ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಚೌಕಿದಾರ್‌ ಪ್ರಧಾನಿ ಚೋರ್‌ ಹೈ ಎಂದು ಹೇಳಿದೆಯೆಂದು ತಪ್ಪಾಗಿ ವ್ಯಾಖ್ಯಾನಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ಹೇಳಿಕೆಗೆ ಮತ್ತೊಮ್ಮೆ ಸುಪ್ರೀಂಕೋರ್ಟ್‌ನಲ್ಲಿ ಕ್ಷಮೆ ಕೇಳಿದ್ದಾರೆ. ಆದರೆ, ಈ ಬಾರಿಯೂ ಅವರು ಹಿಂದಿನಂತೆ ತಮ್ಮ ಅಫಿಡವಿಟ್‌ನಲ್ಲಿ ಆವರಣ (ಬ್ರಾಕೆಟ್‌)ದೊಳಗೆ ಕ್ಷಮೆ ಕೇಳಿದ್ದಾರೆ. ಹಿಂದೆ ಇದೇ ಕಾರಣಕ್ಕೆ ತಿರಸ್ಕೃತವಾಗಿದ್ದ ಅವರ ಕ್ಷಮಾಪಣೆ ಕೋರಿಕೆ ಈ ಬಾರಿ ಅಂಗೀಕಾರವಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಚೌಕಿದಾರ್‌ ಚೋರ್‌ ಹೈ ಎಂದು ಸುಪ್ರೀಂಕೋರ್ಟ್‌ ಹೇಳಿರದೆ ಇದ್ದರೂ ಸುಪ್ರೀಂಕೋರ್ಟ್‌ ಹಾಗೆ ಹೇಳಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆಂದು ಆರೋಪಿಸಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಪ್ರಕರಣ ಹೂಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್‌ ಅವರಿಗೆ ಸುಪ್ರೀಂಕೋರ್ಟ್‌ ನೋಟಿಸ್‌ ನೀಡಿತ್ತು. ಅದಕ್ಕೆ ಸೋಮವಾರ ಉತ್ತರ ರೂಪದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ಪೀಠದ ಮುಂದೆ ಅಫಿಡವಿಟ್‌ ಸಲ್ಲಿಸಿದ ರಾಹುಲ್‌, ‘ಯಾವ ಕೋರ್ಟ್‌ ಕೂಡ ಹೀಗೆ (ಪ್ರಧಾನಿ ಕಳ್ಳ ಎಂದು) ಹೇಳುವುದಿಲ್ಲ. ಆದ್ದರಿಂದ ನಾನು ಹಾಗೆ ಹೇಳಿದ್ದು ದುರದೃಷ್ಟಕರ (ಇದಕ್ಕೆ ವಿಷಾದಿಸುತ್ತೇನೆ). ಚುನಾವಣಾ ಪ್ರಚಾರದ ಬಿಸಿಯಲ್ಲಿ ರಾಜಕೀಯ ಘೋಷಣೆಯಾಗಿ ಹಾಗೆ ಹೇಳಿದ್ದೆ. ಅದನ್ನು ಕೋರ್ಟ್‌ನ ಹೇಳಿಕೆ ಎಂಬಂತೆ ಪರಿಗಣಿಸಬಾರದು’ ಎಂದು ಹೇಳಿದರು.

‘ನ್ಯಾಯಾಲಯವನ್ನು ರಾಜಕೀಯಕ್ಕೆ ಎಳೆದು ತರುವುದು ಅಥವಾ ನ್ಯಾಯಾಲಯಕ್ಕೆ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಆದರೆ, ಸರ್ಕಾರದ ನಾನಾ ಅಂಗಗಳು ಹಾಗೂ ಆಡಳಿತಾರೂಢ ಪಕ್ಷವು ಕಳೆದ ವರ್ಷದ ಡಿಸೆಂಬರ್‌ 14ರಂದು ಸುಪ್ರೀಂಕೋರ್ಟ್‌ ತನ್ನ ಆದೇಶದಲ್ಲಿ ರಫೇಲ್‌ ಹಗರಣದಲ್ಲಿ ಸರ್ಕಾರಕ್ಕೆ ಕ್ಲೀನ್‌ಚಿಟ್‌ ನೀಡಿದೆ ಎಂದು ಹೇಳಿಕೊಂಡಿವೆ.

ಏ.10ರಂದು ನಾನು ಮಾಡಿದ ಭಾಷಣದಲ್ಲಿ ಸರ್ಕಾರದ ಈ ಸುಳ್ಳಿಗೆ ತಿರುಗೇಟು ನೀಡಿದ್ದೇನೆಯೇ ಹೊರತು ಕೋರ್ಟ್‌ನ ತೀರ್ಪಿಗೆ ಅಗೌರವ ತಂದಿಲ್ಲ. ರಫೇಲ್‌ ವಿವಾದವು ಕೋರ್ಟ್‌ನಲ್ಲಿದ್ದರೂ ಈ ಬಗ್ಗೆ ಸಮಾಜದಲ್ಲಿ ಹಾಗೂ ಮಾಧ್ಯಮಗಳಲ್ಲಿ ನಿರಂತರವಾಗಿ ಚರ್ಚೆ ನಡೆಯುತ್ತಿದೆ ಎಂಬುದನ್ನು ನ್ಯಾಯಾಲಯ ಗಮನಿಸಬೇಕು’ ಎಂದು ಮನವಿ ಮಾಡಿದರು.

ರಾಹುಲ್‌ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆ ಏ.30ರಂದು ನಡೆಯಲಿದೆ. ಕೆಲ ದಿನಗಳ ಹಿಂದೆ ಇದೇ ವಿಷಯಕ್ಕೆ ನ್ಯಾಯಾಂಗ ನಿಂದನೆಯ ಮೊದಲ ನೋಟಿಸ್‌ ಜಾರಿಯಾಗಿದ್ದಾಗಲೂ ರಾಹುಲ್‌ ಗಾಂಧಿ ತಮ್ಮ ಅಫಿಡವಿಟ್‌ನಲ್ಲಿ ತಪ್ಪಿಗೆ ವಿಷಾದ ವ್ಯಕ್ತಪಡಿಸುವುದಾಗಿ ಆವರಣ (ಬ್ರಾಕೆಟ್‌)ದೊಳಗೆ ಹೇಳಿದ್ದರು. ಅದನ್ನು ಪರಿಗಣಿಸದೆ ಕೋರ್ಟ್‌ ನ್ಯಾಯಾಂಗ ನಿಂದನೆ ವಿಚಾರಣೆಗೆ ಸಂಬಂಧಿಸಿದಂತೆ ಎರಡನೇ ನೋಟಿಸ್‌ ಜಾರಿಗೊಳಿಸಿತ್ತು.