ಶಿಮ್ಲಾ[ಮೇ.18]: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರದಂದು ಪ್ರಧಾನಿ ಮೋದಿಗೆ ಭ್ರಷ್ಟಾಚಾರ ಕುರಿತಾಗಿ ಚರ್ಚೆ ನಡೆಸಲು ಬನ್ನಿ ಎಂದು ಸವಾಲೆಸೆದಿದ್ದಾರೆ. ಅಲ್ಲದೇ ತನ್ನ ಬಳಿ ಇರುವ ನಾಲ್ಕು ಪ್ರಶ್ನೆಗಳಿಗೆ ಮೋದಿ ಬಳಿ ಉತ್ತರವಿಲ್ಲ ಎಂದು ಚಾಲೆಂಜ್ ಮಾಡಿದ್ದಾರೆ.

ಶಿಮ್ಲಾದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಧನೀರಾಮ್ ಶಾಂಡಿಲ್ ಪರ ಪ್ರಚಾರ ನಡೆಸುತ್ತಿದ್ದ ರಾಹುಲ್ ಗಾಂಧಿ 'ನಾಣು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮೋದಿಯವರೊಂದಿಗೆ ಎಲ್ಲಿ ಬೇಕಾದರೂ ಚರ್ಚೆ ನಡೆಸಲು ಸಿದ್ಧನಿದ್ದೇನೆ. ನನಗೆ 15 ನಿಮಿಷ ಸಮಯ ನೀಡಿ. ನಾನು ಕೇವಲ 4 ಪ್ರಶ್ನೆಗಳನ್ನು ಕೇಳುತ್ತೇನೆ. ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲು ಮೋದಿ ಸುಮಾರು 3-4 ಗಂಟೆ ತೆಗೆದುಕೊಳ್ಳುತ್ತಾರೆ. ಈ ಚರ್ಚೆ ಬಳಿಕ ಅವರು ದೇಶದ ಜನತೆಗೆ ಮುಖ ತೋರಿಸಲೂ ಸಾಧ್ಯವಿಲ್ಲದಷ್ಟೂ ಕುಗ್ಗುತ್ತಾರೆ' ಎಂದಿದ್ದಾರೆ. ರಫೇಲ್ ಡೀಲ್ ಕುರಿತಾದ ಆರೋಪವನ್ನು ಮತ್ತೊಮ್ಮೆ ಉಲ್ಲೇಖಿಸಿದ ರಾಹುಲ್ ಅನಿಲ್ ಅಂಬಾನಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಅವರು ಈ ಒಪ್ಪಂದ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ನೋಟ್ ಬ್ಯಾನ್ ಹಾಗೂ GST ವಿಚಾರವಾಗಿಯೂ ಮಾತನಾಡಿದ ರಾಹುಲ್ ಗಾಂಧಿ 'ಮೋದಿ ನೋಟ್ ಬ್ಯಾನ್ ಹಾಗೂ GST ಅಳವಡಿಸಿ ತಪ್ಪು ಮಾಡಿದ್ದಾರೆ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಮೋದಿ ಯಾವತ್ತಿಗೂ ಇದನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ದೂರಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.