ಪಾಟ್ನಾ(ಮೇ.08): ಲೋಕಸಭೆ ಚುನಾವಣೆ ಘೋಷಣೆಯಾಗಿದ್ದೇ ತಡ, ವಿರೋಧ ಪಕ್ಷಗಳ ನಾಯಕರೆಲ್ಲಾ ಸೇರಿ ಪ್ರಧಾನಿ ಮೋದಿಗೆ ಹೊಸ ಹೊಸ ನಾಮಕರಣ ಮಾಡುತ್ತಿದ್ದಾರೆ.

ಲೋಕ ಸಮರಕ್ಕೂ ಮೊದಲೇ ಪ್ರಧಾನಿ ಮೋದಿ ಅವರನ್ನು ‘ಚೌಕಿದಾರ್ ಚೋರ್ ಹೇ’ ಎಂದಿದ್ದ ರಾಹುಲ್, ಚುನಾವಣಾ ಪ್ರಚಾರಗಳಲ್ಲಿ ಈ ಘೋಷವಾಕ್ಯವನ್ನು ಭರ್ಜರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಅದರಂತೆ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ಮೋದಿ ಅವರಿಗೆ ದುರ್ಯೋಧನ ಎಂದಿದ್ದಾರೆ. ಮತ್ತೋರ್ವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಮೋದಿ ಅವರನ್ನು ಔರಂಗಜೇಬ್ ಎಂದು ನಾಮಕರಣ ಮಾಡಿದ್ದಾರೆ.

ಇದೀಗ ಮೋದಿ ಅವರಿಗೆ ಹೆಸರಿಡುವ ಸರದಿ ಬಿಹಾರ ಮಾಜಿ ಸಿಎಂ, ಆರ್ ಜೆಡಿ ನಾಐಕ ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ಡಿ ದೇವಿಯರದ್ದು.

ಪ್ರಧಾನಿ ಮೋದಿ ಓರ್ವ ಜಲ್ಲಾದ್(ಕ್ರೂರಿ)ಎಂದು ರಾಬ್ಡಿ ದೇವಿ ಜರೆದಿದ್ದಾರೆ. ಯಾವ ವ್ಯಕ್ತಿ ಪತ್ರಕರ್ತರು, ನ್ಯಾಯಾಧೀಶರನ್ನು ರಾತ್ರೋರಾತ್ರಿ ಅಪಹರಣ ಮಾಡಬಲ್ಲನೋ ಆತ ಕ್ರೂರಿಯಾಗಿರಲು ಮಾತ್ರ ಸಾಧ್ಯ ಎಂದು ರಾಬ್ಡಿ ಟ್ವಿಟ್ ಮಾಡಿದ್ದಾರೆ.

ಕ್ರೂರ ಮಾನಸಿಕತೆ ಹೊಂದಿರುವ ಮೋದಿ ಬಿಹಾರಕ್ಕೆ ಬಂದು ವಿಷ ಹರಡುತ್ತಿದ್ದಾರೆ ಎಂದು ರಾಬ್ಡಿ ತಮ್ಮ ಟ್ವಿಟ್ ನಲ್ಲಿ ಹರಿಹಾಯ್ದಿದ್ದಾರೆ.