ಬೆಂಗಳೂರು :  ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಾನ್ಯತಾ ಟೆಕ್‌ಪಾರ್ಕ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ ಮೋದಿ ಪರವಾಗಿ ಘೋಷಣೆ ಕೂಗಿದ ಕೆಲ ಸಾಫ್ಟ್‌ವೇರ್‌ ಉದ್ಯೋಗಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ, ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಪರ ಘೋಷಣೆ ಕೂಗಿದ ಸಾರ್ವಜನಿಕರ ನೆರವಿಗೆ ಪಕ್ಷ ನಿಲ್ಲಲಿದ್ದು, ಅವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಘೋಷಣೆ ಕೂಗಿದವರನ್ನು ಪೊಲೀಸ್‌ ಸ್ಟೇಷನ್‌ಗೆ ಕರೆದೊಯ್ದು ಅವರ ಮೊಬೈಲ್‌ ಕಸಿದು ಅವರಿಗೆ ಬೆದರಿಕೆ ಹಾಕಿರುವುದು ನಾಚಿಕೆಗೇಡು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಾಕ್‌ ಸ್ವಾತಂತ್ರ್ಯವಿದೆ. ಪ್ರಧಾನಿ ಪರವಾಗಿ ಘೋಷಣೆ ಕೂಗಿದ್ದನ್ನು ಇವರಿಗೆ ಸಹಿಸಲು ಆಗಿಲ್ಲ. ಘೋಷಣೆ ಕೂಗಿದವರು ಬಿಜೆಪಿ ಕಾರ್ಯಕರ್ತರಲ್ಲ, ಸಾರ್ವಜನಿಕರು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮವನ್ನು ಹಾಳು ಮಾಡಲು ಬಿಜೆಪಿ ಕಾರ್ಯಕರ್ತರನ್ನು ಕಳುಹಿಸಿ ಘೋಷಣೆ ಕೂಗಿಸಿತು ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪವನ್ನು ತಳ್ಳಿ ಹಾಕಿದರು. ಮೋದಿ ಅಭಿಮಾನಿಗಳಾದ ಈ ಸಾಫ್ಟ್‌ವೇರ್‌ ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ ಘೋಷಣೆ ಕೂಗಿದ್ದು, ಇದನ್ನು ಕ್ರೀಡಾ ಸ್ಫೂರ್ತಿಯಾಗಿ ಕಾಂಗ್ರೆಸ್‌ ನಾಯಕರು ಸ್ವೀಕರಿಸಬೇಕಿತ್ತು. ಅದು ಬಿಟ್ಟು ಅವರ ವಿರುದ್ಧ ಪೊಲೀಸ್‌ ದೌರ್ಜನ್ಯ ಎಸಗಿರುವ ಖಂಡನೀಯ ಎಂದರು.

ಪೊಲೀಸ್‌ ಆಯುಕ್ತರಿಗೆ ದೂರು:  ನಂತರ ಅಶೋಕ್‌ ಅವರು ಈ ಸಂಬಂಧ ಬಿಜೆಪಿ ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಸಿ, ಯಾವುದೇ ಕಾರಣಕ್ಕೂ ಅಧಿಕಾರ ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.