ಮಂಗಳೂರು: ಎಲ್ಲ ಕಡೆಗಳಲ್ಲೂ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿವಳಿಕೆ ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಪುತ್ತೂರಿನಲ್ಲೊಂದು ಸ್ಟಾರ್ಟ್‌ಅಪ್‌ ಕಂಪನಿ ಮತದಾನ ಮಾಡದಿದ್ದರೆ, ಒಂದು ತಿಂಗಳ ವೇತನ ನೀಡುವುದಿಲ್ಲ ಎಂದು ತನ್ನ ನೌಕರರಿಗೆ ಫರ್ಮಾನು ಹೊರಡಿಸಿದೆ. ಈ ಮೂಲಕ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಆಶಯವನ್ನು ವ್ಯಕ್ತಪಡಿಸಿದೆ.

ನಾಲ್ಕು ವರ್ಷ ಹಿಂದೆ ಸ್ಥಾಪನೆಗೊಂಡ ಪುತ್ತೂರಿನ ‘ದ ವೆಬ್‌ ಪೀಪಲ್‌’ ಹೆಸರಿನ ಸ್ಟಾರ್ಟ್‌ಅಪ್‌ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಕಂಪನಿ ಈ ವೇತನ ನಿರಾಕರಣೆಯ ಹೆಜ್ಜೆಗೆ ಮುಂದಾಗಿರುವ ಸಂಸ್ಥೆ.

ಯಾವುದೇ ಚುನಾವಣೆ ಬರಲಿ, ನಗರ ಪ್ರದೇಶದಲ್ಲಿ ಕನಿಷ್ಠ ಮತದಾನ ದಾಖಲಾದರೆ ಟೆಕ್ಕಿಗಳು ಮತದಾನ ಮಾಡುವುದಿಲ್ಲ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿರುವ ದೂರು. ಇದಕ್ಕೆ ಅಪವಾದ ಎಂಬಂತೆ ಈ ಕಂಪನಿಯ ಮುಖ್ಯಸ್ಥರು ತನ್ನ ನೌಕರರ ಸಭೆ ನಡೆಸಿ ಮತದಾನ ಮಾಡುವ ಪ್ರತಿಜ್ಞೆ ಮಾಡಿಸಿದರು. ಅಲ್ಲದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಿದರು. ರಾಜ್ಯದಲ್ಲಿ ಏ.18 ಮತ್ತು 23ರಂದು ಎರಡು ಹಂತದಲ್ಲಿ ಮತದಾನ ನಡೆಯುತ್ತದೆ. 

ಈ ಕಂಪನಿಯಲ್ಲಿ 25 ಮಂದಿ ನೌಕರರಿದ್ದಾರೆ. ಇವರೆಲ್ಲರೂ ಮತದಾನದ ಹಕ್ಕನ್ನು ಹೊಂದಿದ್ದಾರೆ. ಹಾಗಾಗಿ ನೌಕರರಿಗೆ ಮತದಾನಕ್ಕೆ ಹೋಗಿಬರಲು ವೇತನ ಸಹಿತ ಎರಡು ದಿನ ರಜೆ ನೀಡಲೂ ಸಂಸ್ಥೆ ನಿರ್ಧರಿಸಿದೆ. ಮತದಾನ ಮುಗಿಸಿ ಬಂದ ಬಳಿಕ ಮತದಾನ ಮಾಡಿದ ಬಗ್ಗೆ ಬೆರಳಿನಲ್ಲಿ ಶಾಯಿ ಗುರುತನ್ನು ತೋರಿಸಬೇಕು. ಇಲ್ಲದಿದ್ದರೆ, ಒಂದು ತಿಂಗಳ ವೇತನವೇ ಕಟ್‌.