ಪಟಿಯಾಲಾ(ಮೇ.09): ಭಾರತದ ಮಿಲಿಟರಿ ಇತಿಹಾಸ ಗೊತ್ತಿದ್ದವರಿಗೆ ಈ ಹಿಂದೆಯೂ ಹಲವು ಬಾರಿ ಸರ್ಜಿಕಲ್ ದಾಳಿ ನಡೆದಿವೆ ಎಂಬ ಸತ್ಯ ಗೊತ್ತು ಎಂದು ಪಂಜಾಬ್ ಸಿಎಂ ಮತ್ತು ಭಾರತೀಯ ಸೇನೆಯ ಮಾಜಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.

1964 ರಿಂದ 1967ರ ಅವಧಿಯಲ್ಲಿ ತಾವು ವೆಸ್ಟರ್ನ್ ಕಮಾಂಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹಲವು ಬಾರಿ ಗಡಿ ದಾಟಿ ದಾಳಿ ನಡೆಸಿದ ಉದಾಹರಣೆಗಳಿವೆ ಎಂದು ಕ್ಯಾ.ಅಮರೀಂದರ್ ಸಿಂಗ್ ಪ್ರತಿಪಾದಿಸಿದ್ದಾರೆ. ಕನಿಷ್ಟ ನೂರಕ್ಕೂ ಅಧಿಕ ಬಾರಿ ಗಡಿ ದಾಟಿ ಭಾರತೀಯ ಸೇನೆ ದಾಳಿ ನಡೆಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಸಲಿಗೆ ಸೇನಾ ಭಾಷೆಯಲ್ಲಿ ಇದನ್ನು ಕ್ರಾಸ್ ಬಾರ್ಡರ್ ಆಪರೇಶನ್ ಎಂದು ಕರೆಯಲಾಗುತ್ತದೆ. ಆದರೆ ಬಿಜೆಪಿ ಇದಕ್ಕೆ ಸರ್ಜಿಕಲ್ ಸ್ಟ್ರೈಕ್ ಎಂಬ ಹೊಸ ಹೆಸರಿಟ್ಟಿದೆ ಎಂದು ಪಂಜಾಬ್ ಸಿಎಂ ಕಿಡಿಕಾರಿದ್ದಾರೆ.

ಬಿಜೆಪಿಗೆ ಈ ದೇಶದ ಇತಿಹಾಸವೇ ಗೊತ್ತಿಲ್ಲ, ಅಂತದ್ದರಲ್ಲಿ ಸೇನಾ ಇತಿಹಾಸ ಗೊತ್ತಿರಲು ಹೇಗೆ ಸಾಧ್ಯ ಎಂದು ಅಮರೀಂದರ್ ಸಿಂಗ್ ಪ್ರಶ್ನಿಸಿದ್ದಾರೆ.

ಪುಲ್ವಾಮಾ ದಾಳಿ ಮತ್ತು ಆ ನಂತರ ನಡೆದ ಬಾಲಾಕೋಟ್ ವಾಯುದಾಳಿಯನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ, ಸೈನ್ಯದ ಪರಾಕ್ರಮವನ್ನೂ ತನ್ನ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕ್ಯಾ. ಸಿಂಗ್ ಹರಿಹಾಯ್ದಿದ್ದಾರೆ.

ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ 1960 ಅವಧಿಯಲ್ಲಿ ಭಾರತೀಯ ಸೇನೆಯ ಸಿಖ್ ರೆಜಿಮೆಂಟ್'ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ