ಬೆಂಗಳೂರು (ಏ. 16):  ಲೋಕಸಭಾ ಚುನಾವಣೆಗಾಗಿ ಕಳೆದ 25 ದಿನಗಳಿಂದ ವಾಕ್ಸಮರ, ಟೀಕಾಪ್ರಹಾರ, ವೈಯಕ್ತಿಕ ನಿಂದನೆ ನಡೆಸುತ್ತ ಹಲವು ಬಗೆಯಲ್ಲಿ ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಅಂತ್ಯವಾಗಲಿದೆ.

ರಾಜ್ಯದಲ್ಲಿ ಮೊದಲನೇ ಹಂತದಲ್ಲಿ ಏ.18ರಂದು ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರಬೀಳಲಿದ್ದು, ಬುಧವಾರ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾತ್ರ ಕೈಗೊಳ್ಳಲಿದ್ದಾರೆ. ಮೊದಲ ಹಂತದ 14 ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತೀವ್ರ ಜಿದ್ದಾಜಿದ್ದಿ ಕ್ಷೇತ್ರವಾಗಿದೆ.

ಇಂದು ಸಂಜೆ 6 ಗಂಟೆವರೆಗೆ ಮಾತ್ರ ತಮ್ಮ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ನಡೆಸಲು ಆಯೋಗವು ಅವಕಾಶ ನೀಡಿದೆ. ನಂತರ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಹೊರಗೆ ಹೋಗಬೇಕು ಎಂದು ತಾಕೀತು ಮಾಡಿದೆ.

ನಟಿ ಸುಮಲತಾ ಅಂಬರೀಶ್‌ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆ ಕ್ಷೇತ್ರದಲ್ಲಿನ ಚಿತ್ರಣವೇ ಬದಲಾಯಿತು. ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪಣತೊಟ್ಟಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಇತರೆ ಕ್ಷೇತ್ರಗಳಿಗಿಂತ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ಉಡುಪಿ-ಚಿಕ್ಕಬಳ್ಳಾಪುರ, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಏ.18ರಂದು ಮತದಾನ ನಡೆಯಲಿದೆ. ಮತದಾನ ನಡೆಯುವ 48 ಗಂಟೆ ಮುನ್ನ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌-ಜೆಡಿಎಸ್‌ ಸೇರಿದಂತೆ ಪಕ್ಷೇತರರು ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು ನಡೆಸುವಲ್ಲಿ ತೊಡಗಿದ್ದಾರೆ. ಸಂಜೆ ಬಳಿಕ ಅಭ್ಯರ್ಥಿಯನ್ನು ಬಿಟ್ಟು ಇತರೆ ವ್ಯಕ್ತಿಗಳು ಕ್ಷೇತ್ರದಿಂದ ಹೊರಗೆ ಹೋಗಲಿದ್ದಾರೆ. ಒಂದು ವೇಳೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಹೊರತು ಪಡಿಸಿ ಇತರೆ ವ್ಯಕ್ತಿಗಳು ಕಾಣಿಸಿಕೊಂಡರೆ ಚುನಾವಣಾ ಆಯೋಗವು ಮುಂದಿನ ಕಾನೂನು ಕ್ರಮ ಜರುಗಿಸಲಿದೆ.