ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್  ಗಾಂಧಿ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಮೋದಿ ಎಂದು ಘೋಷಣೆ ಕೂಗಿದ ಸಂಬಂಧ ಕೆಪಿಸಿಸಿ  ನಗರ ಪೊಲೀಸ್ ಆಯುಕ್ತರಿಗೆ  ದೂರು ನೀಡಲಾಗಿದೆ. 

MLC ವೇಣುಗೋಪಾಲ್ ನಿಯೋಗದಿಂದ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಅವರಿಗೆ ದೂರು  ಸಲ್ಲಿಸಲಾಗಿದೆ. ಅಲ್ಲದೇ ಮೋದಿ ಎಂದು ರಾಹುಲ್ ಆಗಮನದ ವೇಳೆ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. 

ಮಾನ್ಯತಾ ಟೆಕ್ ಪಾರ್ಕ್ ಗೆ ಸಂವಾದ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದ ವೇಳೆ ಹಲವರು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ. ಎಸ್ ಪಿ ಜಿ ಭದ್ರತೆ ನೀಡಲಾಗಿರುವ ರಾಹುಲ್ ಗಾಂಧಿ ಅವರತ್ತ ಘೋಷಣೆ ಕೂಗುತ್ತ ಗುಂಪು ನುಗ್ಗಲು ಪ್ರಯತ್ನ ಮಾಡಿದೆ. ಈ ನಿಟ್ಟಿನಲ್ಲಿ ದೂರು ಸಲ್ಲಿಸಲಾಗಿದೆ ಎಂದು ಎಂ ಎಲ್ ಸಿ ವೇಣುಗೋಪಾಲ್ ಹೇಳಿದ್ದಾರೆ. 

ಮತ್ತೆ ಇಂತಹ ಅಚಾತುರ್ಯಗಳು ಸಂಭವಿಸದಂತೆ ರಾಜಕೀಯ ಪ್ರೇರಿತ ಗುಂಪಿನ ಸದಸ್ಯರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.