ಗಾಂಧಿನಗರ[ಮಾ.13]: ಸಕ್ರಿಯ ರಾಜಕೀಯ ಅಖಾಡಕ್ಕೆ ಧುಮುಕಿದ ಒಂದು ತಿಂಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದೇ ಮೊದಲ ಬಾರಿಗೆ ರಾಜಕೀಯ ಸಮಾವೇಶದಲ್ಲಿ ಭಾಷಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತವರು ರಾಜ್ಯ ಗುಜರಾತಿನ ಗಾಂಧಿನಗರದ ಅದಲಜ್ ಎಂಬ ಹಳ್ಳಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮೋದಿ ಹೆಸರೆತ್ತದೇ ಅವರ ವಿರುದ್ಧ ಅಬ್ಬರಿಸಿದ್ದಾರೆ.

‘ನಿಮ್ಮಗಳ ಎದುರು ದೊಡ್ಡದಾಗಿ ಮಾತನಾ ಡುವವರ ಬಗ್ಗೆ ಯೋಚಿಸಿ, ನಿರ್ಧರಿಸಿ. ಉದ್ಯೋಗ ಸೃಷ್ಟಿ ಬಗ್ಗೆ ಕೊಟ್ಟಿದ್ದ ಭರವಸೆ ಏನಾಯಿತು? ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರು. ಹಾಕುವುದಾಗಿ ಹೇಳಿದ್ದರಲ್ಲ, ಅದು ಏನಾಯಿತು? ಮಹಿಳಾ ಸುರಕ್ಷತೆ ಏನಾಯಿತು?’ ಎಂದು ಬಿಳಿ ಹಾಗೂ ನೀಲಿ ಸೀರೆ ಧರಿಸಿದ್ದ ಪ್ರಿಯಾಂಕಾ ಗುಡುಗಿದರು.

ಏಪ್ರಿಲ್- ಮೇ ತಿಂಗಳಿನಲ್ಲಿ ನಡೆಯುವ ಲೋಕಸಭೆ ಚುನಾವಣೆ ಸ್ವಾತಂತ್ರ್ಯ ಹೋರಾಟ ಕ್ಕಿಂತ ಕಡಿಮೆ ಏನಿಲ್ಲ. ದೇಶದಲ್ಲಿ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ. ಎಲ್ಲೆಡೆ ದ್ವೇಷ ಪಸರಿಸಲಾಗುತ್ತಿದೆ. ದೇಶವನ್ನು ರಕ್ಷಿಸಿ, ಮುನ್ನಡೆಯುವುದಕ್ಕಿಂತ ದೊಡ್ಡ ವಿಚಾರ ಮತ್ತೊಂದಿಲ್ಲ. ನಿಮ್ಮ ಮತವೇ ನಿಮ್ಮ ಅಸ್ತ್ರ. ಉತ್ತಮ ನಿರ್ಧಾರ ಕೈಗೊಳ್ಳಿ. ಸರಿಯಾದ ಪ್ರಶ್ನೆಗಳನ್ನು ಕೇಳಿ ಎಂದು ಸಲಹೆ ಮಾಡಿದರು.

ಸ್ವಭಾವದ ಬಗ್ಗೆ ಕೆಲವರು ಮಾತನಾಡುತ್ತಾರೆ. ಆದರೆ ನಮ್ಮ ದೇಶದ ಸ್ವಭಾವವೇ ಸತ್ಯ ನಿರೀಕ್ಷಿಸುವುದು. ದ್ವೇಷದ ಗಾಳಿಯನ್ನು ಪ್ರೀತಿಯಿಂದ ತಳ್ಳುವುದೇ ನಮ್ಮ ಸ್ವಭಾವ ಎಂದು 47 ವರ್ಷದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋದಿ ಹೆಸರೆತ್ತದೇ ತಿರುಗೇಟು ನೀಡಿದರು. ಅಲ್ಲದೆ, ಇಂತಹ ವಿಚಾರಗಳನ್ನು ಇನ್ನು ಮುಂದೆ ಎತ್ತುತ್ತಲೇ ಇರುತ್ತೇವೆ. ನಿಮ್ಮ ಎದುರು ಇಂಥ ವಿಷಯ ಎತ್ತುವವರಿಗೆ ಸರಿಯಾದ ಪ್ರಶ್ನೆ ಕೇಳಿ. ಇದು ನಿಮ್ಮದೇ ದೇಶ. ನೀವೇ ದೇಶ ಕಾಪಾಡಬೇಕು ಎಂದು ಹುರಿದುಂಬಿಸಿದರು. ಕೆಲ ದಿನಗಳ ಹಿಂದೆ ಅಹಮದಾಬಾದ್‌ನಲ್ಲಿ ಮಾತನಾಡಿದ್ದ ಮೋದಿ ಅವರು, ತಪ್ಪು ಮಾಡಿದವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದೇ ನನ್ನ ಸ್ವಭಾವ ಎಂದು ಪಾಕಿಸ್ತಾನ ಉದ್ದೇಶಿಸಿ ಹೇಳಿದ್ದರು

ದೇಶ ಪ್ರೀತಿ ಹಾಗೂ ಸೋದರತೆ ಆಧರಿಸಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬೇಸರ ತರಿಸುತ್ತಿವೆ. ಜಾಗೃತಿ ಗಿಂತ ದೊಡ್ಡ ದೇಶಭಕ್ತಿ ಮತ್ತೊಂದಿಲ್ಲ. ನಿಮ್ಮಗಳ ಜಾಗೃತಿಯೇ ನಮ್ಮ ಅಸ್ತ್ರ. ನಿಮ್ಮ ಮತವೇ ನಿಮ್ಮಗಳ ಅಸ್ತ್ರ. ಯಾರಿಗೂ ನೋವುಂಟು ಅಥವಾ ಹಾನಿ ಮಾಡದ ಅಸ್ತ್ರವಿದು. ಆ ಅಸ್ತ್ರವೇ ನಿಮಗೆ ಶಕ್ತಿ ತುಂಬುತ್ತದೆ ಎಂದರು.