ಅಮೇಠಿ[ಮೇ.02]: ಉತ್ತರ ಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಕ್ಕಳೊಂದಿಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅಮೇಠಿಯಲ್ಲಿ ರಾಹುಲ್ ಗಾಂಧಿ ಪರ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಶಾಲಾ ಮಕ್ಕಳನ್ನು ಭೇಟಿಯಾಗಿದ್ದರು. ಈ ವೇಳೆ ಮಕ್ಕಳ ಬಾಯಿಯಲ್ಲಿ ಕೇಳಿ ಬಂದ ಮಾತುಗಳನ್ನು ಕೇಳಿ ಗಾಬರಿಯಾದ ಪ್ರಿಯಾಂಕಾ ಗಾಂಧಿ ಅಂತಹ ಮಾತುಗಳನ್ನಾಡದಂತೆ ಕಿವಿ ಮಾತು ಹೇಳಿದ್ದಾರೆ. ಅಷ್ಟಕ್ಕೂ ಮಕ್ಕಳು ಹೆಳಿದ್ದೇನು?

ಹೌದು ಪ್ರಿಯಾಂಕಾ ಗಾಂಧಿ ತನ್ನನ್ನು ಸ್ವಾಗತಿಸಲು ಬಂದ ಹಾಗೂ ಮಾತನಾಡಲು ಬಂದ ಮಕ್ಕಳೆಡೆ ನಗುತ್ತಾ ಆಗಮಿಸುತ್ತಿದ್ದರು. ಈ ವೇಳೆ ಕಾಂಗ್ರೆಸ್ ನಾಯಕಿಯನ್ನು ಘೋಷಣೆ ಮೂಲಕ ಮಕ್ಕಳು ಸ್ವಾಗತಿಸಿದ್ದಾರೆ. ಇದನ್ನು ಕೇಳಿ ಪ್ರಿಯಾಂಕಾ ಗಾಂಧಿ ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ ಮಕ್ಕಳು ಇದ್ದಕ್ಕಿದ್ದಂತೆ 'ಚೌಕೀದಾರ್ ಚೋರ್ ಹೇ' ಎಂದು ಘೋಷಣೆ ಆರಂಭಿಸಿದ್ದು, ಮಕ್ಕಳ ಬಾಯಿಯಲ್ಲಿ ಈ ಮಾತುಗಳನ್ನು ಕೇಳಿದ ಪ್ರಿಯಾಂಕಾ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಆ ಕೂಡಲೇ ಮಕ್ಕಳನ್ನು ಹತ್ತಿರ ಕರೆದ ಪ್ರಿಯಾಂಕಾ 'ಇದು ಒಳ್ಳೆಯ ಮಾತಲ್ಲ. ಇಂತಹ ಮಾತುಗಳನ್ನು ಆಡಬೇಡಿ. ಒಳ್ಳೆಯ ಮಕ್ಕಳಾಗಿ' ಎಂದು ಕಿವಿಮಾತು ಹೇಳಿದ್ದಾರೆ. ಇದನ್ನು ಕೇಳಿದ ಮಕ್ಕಳು 'ರಾಹುಲ್ ಗಾಂಧಿ ಜಿಂದಾಬಾದ್' ಎಂಬ ಘೋಷಣೆ ಕೂಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡಾ ಇದನ್ನು ಶೇರ್ ಮಾಡುತ್ತಾ 'ದೇಶದ ಪ್ರಧಾನಿ ಎಷ್ಟೆಲ್ಲಾ ಸಹಿಸಬೇಕೆಂದು ನೀವೇ ಯೋಚಿಸಿ' ಎಂದಿದ್ದಾರೆ. ಆದರೆ ಸ್ಮೃತಿ ಇರಾನಿ ಇಲ್ಲಿ ಎಡಿಟೆಡ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಎಂಬುವುದು ಗಮನಾರ್ಹ. ಈ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಮಕ್ಕಳನ್ನು ತಡೆಯುವ ಭಾಗವನ್ನು ತೆಗೆದು ಹಾಕಲಾಗಿದೆ.

ಆದರೆ ಇತ್ತ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿಯವರು ಮಕ್ಕಳನ್ನು ತಡೆಯುವ ದೃಶ್ಯಾವಳಿಗಳಿರುವ ವಿಡಿಯೋವನ್ನು ಶೇರ್ ಮಾಡಿ ಭೇಶ್ ಎಮದಿದ್ದಾಋಎ. ಆಮ್ ಆದ್ಮಿ ಪಕ್ಷದ ನಾಯಕ ಅಲಕಾ ಲಾಂಬಾ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು 'ನನಗೆ ಆಕೆಯ ಪ್ರತಿಕ್ರಿಯೆ ಬಹಳ ಇಷ್ಟವಾಯಿತು. ಮಕ್ಕಳನ್ನು ಅವರು ಸರಿಯಾದ ಸಮಯಕ್ಕೆ ತಡೆದಿದ್ದಾರೆ ಎಂಬುವುದು ಒಳ್ಳೆಯ ವಿಚಾರ' ಎಂದಿದ್ದಾರೆ.