ಬೆಂಗಳೂರು (ಏ. 09):  ನರೇಂದ್ರ ಮೋದಿ ಅವರ ಕ್ಷೇತ್ರ ವಾರಾಣಸಿಯಲ್ಲಿ ಎಲ್ಲ ವಿಪಕ್ಷಗಳ ಪರವಾಗಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಸ್ತಾವನೆ ಇಟ್ಟಿದ್ದು, ಅಖಿಲೇಶ್‌ ಯಾದವ್‌ ಇದನ್ನು ಒಪ್ಪಿಕೊಂಡಿದ್ದಾರೆ.

ಆದರೆ, ಬೆಹೆನ್‌ ಮಾಯಾವತಿ ಸಮ್ಮತಿ ಇನ್ನೂ ಸಿಕ್ಕಿಲ್ಲ. ಮೋದಿ ವಿರುದ್ಧ ನಿಲ್ಲುವಂತೆ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಮುರಳಿ ಮನೋಹರ ಜೋಶಿ ಅವರನ್ನೇ ಪ್ರಿಯಾಂಕಾ ಗಾಂಧಿ ಸಂಪರ್ಕ ಮಾಡಿದ್ದಾರೆ ಎನ್ನುವ ಸುದ್ದಿಗಳಿವೆ. ನರೇಂದ್ರ ಮೋದಿ ಹಿಂದುಳಿದ ವರ್ಗದವರು, ಯೋಗಿ ಆದಿತ್ಯನಾಥ್‌ ರಜಪೂತರು. ಹೀಗಿರುವಾಗ ಬಿಜೆಪಿ ವಿರುದ್ಧ ಯುಪಿಯಲ್ಲಿ 12 ಪ್ರತಿಶತ ಇರುವ ಬ್ರಾಹ್ಮಣರನ್ನು ಹೊರಗೆ ತಂದರೆ ಮೋದಿ ಸಾಹೇಬರ ನಿದ್ದೆಗೆಡಿಸಬಹುದು ಎನ್ನುವುದು ಪ್ರಿಯಾಂಕಾ ಗಾಂಧಿ ತಂತ್ರವಿದ್ದಂತೆ ಕಾಣುತ್ತದೆ.

ಕೇಜ್ರಿವಾಲ್ ಆಟ

ಆಮ್ ಆದ್ಮಿ ಪಕ್ಷದ ಜೊತೆ ದಿಲ್ಲಿಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೆಂದು ಸ್ವತಃ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲರ ಬೆನ್ನು ಹತ್ತಿದ್ದರೂ ಕೂಡ ಆಮ್ ಆದ್ಮಿ ಪಕ್ಷ ಏನೇನೋ ಸಬೂಬು ಹೇಳಿ ರಾಹುಲ್ರನ್ನು ಸತಾಯಿಸುತ್ತಿದೆ.

ದಿಲ್ಲಿಯ 7 ಸೀಟ್‌ಗಳಲ್ಲಿ 4 ಆಪ್‌ಗೆ ಕೊಟ್ಟು 3ರಲ್ಲಿ ನಿಂತುಕೊಳ್ಳಲು ಕಾಂಗ್ರೆಸ್‌ ತಯಾರಿದೆಯಾದರೂ, ಇದಕ್ಕಾಗಿ ಹರಿಯಾಣದ 3 ಸೀಟು ಕೂಡ ಬಿಟ್ಟುಕೊಡಬೇಕು ಎಂದು ಕೇಜ್ರಿವಾಲ್ ಷರತ್ತು ಹಾಕುತ್ತಿದ್ದಾರೆ. ಒಂದು ವೇಳೆ ದಿಲ್ಲಿಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ಆದರೆ ಬಿಜೆಪಿಗೆ ಕಷ್ಟವಾಗಲಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ