ನವದೆಹಲಿ(ಮೇ.03): ಮಕ್ಕಳ ಗುಂಪೊಂದು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದ ಬಳಸುವುದನ್ನು ತಡೆದಿದ್ದ ಪೂರ್ವ ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿಡಿಯೋ ವೈರಲ್ ಆಗಿತ್ತು.

ಈ ವಿಡಿಯೋ ಟೀಕಿಸಿದ್ದ ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ, ಗೌರವಸ್ಥ ಕುಟುಂಬಸ್ಥರು ತಮ್ಮ ಮಕ್ಕಳನ್ನು ಪ್ರಿಯಾಂಕಾ ಗಾಂಧಿ ಅವರಿಂದ ದೂರ ಇಡಬೇಕು ಎಂದು ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ , ‘ನಾನೂ ತಾಯಿಯಾದ ಕಾರಣ ಮಕ್ಕಳು ಅವಹೇಳನಕಾರಿ ಪದ ಬಳಸುವುದನ್ನು ತಡೆದಿದ್ದೇನೆ..’ ಎಂದು ಹೇಳಿದ್ದಾರೆ.

ನಾನು ಇಡೀ ಜೀವನವನ್ನು ಮಕ್ಕಳ ಪಾಲನೆ ಪೋಷಣೆಯಲ್ಲೇ ಕಳೆದಿದ್ದು, ಮಕ್ಕಳಿಗೆ ಯಾವ ರೀತಿಯ ಸಂಸ್ಕೃತಿ ನೀಡಬೇಕು ಎಂಬುದು ಗೊತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಚುನವಣಾ ಪ್ರಚಾರದ ವೇಳೆ ಮಕ್ಕಳ ಗುಂಪೊಂದನ್ನು ಭೇಟಿ ಮಾಡಿದ್ದ ಪ್ರಿಯಾಂಕಾ ಗಾಂಧಿ, ಈ ವೇಳೆ ಪ್ರಧಾನಿ ಮೋದಿ ಕುರಿತು ಮಕ್ಕಳು ಅವಹೇಳನಕಾರಿ ಪದ ಬಳಸುವುದನ್ನು ತಡೆದಿದ್ದರು. ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕು  ರಕ್ಷಣೆ ಪ್ರಾಧಿಕಾರ ಪ್ರಿಯಾಂಕಾ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ