ಅಲಹಾಬಾದ್‌ (ಮಾ. 19): ಲೋಕಸಭೆಗೆ 80 ಸಂಸದರನ್ನು ಕಳುಹಿಸುವ, ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಗತವೈಭವ ಮರಳಿಸುವ ಹೆಬ್ಬಯಕೆಯೊಂದಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರದಿಂದ ‘ಗಂಗಾ ಯಾತ್ರೆ’ ಆರಂಭಿಸಿದ್ದಾರೆ.

ಗಂಗಾ, ಯಮುನಾ ಹಾಗೂ ಸರಸ್ವತಿ ನದಿಯ ಸಂಗಮ ಸ್ಥಳವಾದ ಅಲಹಾಬಾದ್‌ನಲ್ಲಿರುವ ಲೇಟೆ ಹನುಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಾಣಸಿಯತ್ತ ಪ್ರಿಯಾಂಕಾ ಅವರು ಗಂಗಾ ನದಿಯಲ್ಲಿ ದೋಣಿ ಯಾತ್ರೆ ಪ್ರಾರಂಭಿಸಿದರು. ಅಲಹಾಬಾದ್‌ನಲ್ಲಿರುವ ಲೇಟೆ ಹನುಮ ಮಂದಿರದಲ್ಲಿ ಆಂಜನೇಯ ಮಲಗಿದ ಸ್ಥಿತಿಯಲ್ಲಿದ್ದಾನೆ. ಯಾತ್ರೆ ಮೊದಲ ದಿನವೇ ಸೋದರ ರಾಹುಲ್‌ ಗಾಂಧಿ ರೀತಿ ‘ಟೆಂಪಲ್‌ ರನ್‌’ ನಡೆಸಿದ ಪ್ರಿಯಾಂಕಾ ಹಲವು ದೇಗುಲಗಳಿಗೆ ಭೇಟಿ ನೀಡಿದರು.

ಅಲಹಾಬಾದ್‌ನಿಂದ ವಾರಾಣಸಿಗೆ 100 ಕಿ.ಮೀ. ದೂರವನ್ನು ದೋಣಿ ಮೂಲಕ ಮೂರು ದಿನಗಳಲ್ಲಿ ಕ್ರಮಿಸಲು ಪ್ರಿಯಾಂಕಾ ಉದ್ದೇಶಿಸಿದ್ದಾರೆ. ಈ ಯಾತ್ರೆ ಸಂದರ್ಭದಲ್ಲಿ ಮಾರ್ಗ ಮಧ್ಯೆ ಬರುವ ಗ್ರಾಮ, ದೇಗುಲಗಳಿಗೆ ಭೇಟಿ ನೀಡಲಿದ್ದಾರೆ.

ಇದೇ ವೇಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜನಿಸಿದ ಅಲಹಾಬಾದ್‌ನ ಸ್ವರಾಜ್‌ ಭವನ ಕುರಿತು ಟ್ವೀಟ್‌ ಮಾಡಿದ್ದಾರೆ.