ಬೆಂಗಳೂರು[ಮಾ.21]: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ನಾಯಕರು ಜಂಟಿಯಾಗಿ ಸೂಚಿಸಿದರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧವಿರುವುದಾಗಿ ಕಾಂಗ್ರೆಸ್‌ನ ಮಾಜಿ ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ನಾಯಕರ ಸಭೆಯಲ್ಲಿ ಪಾಲ್ಗೊಂಡ ನಂತರ ರಾತ್ರಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ ಪ್ರಮೋದ್‌ ಮಧ್ವರಾಜ್‌ ಅನಂತರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾವು ಸಿದ್ಧ. ಆದರೆ, ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ ಎಂಬ ಗೊಂದಲದ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್‌ ನಾಯಕರು ಜೆಡಿಎಸ್‌ನಿಂದ ಆಹ್ವಾನ ಬಂದಿದ್ದರೆ ಹಾಗೂ ಸ್ಪರ್ಧಿಸುವ ಮನಸ್ಸು ಇದ್ದರೆ ಆ ಪಕ್ಷದಿಂದಲೇ ಸ್ಪರ್ಧಿಸಬೇಕಾಗುತ್ತದೆ. ಮೈತ್ರಿಕೂಟವಾಗಿ ಜೆಡಿಎಸ್‌-ಕಾಂಗ್ರೆಸ್‌ ಚುನಾವಣೆ ಎದುರಿಸುತ್ತಿದ್ದರೂ ತಾಂತ್ರಿಕವಾಗಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧೆ ಸಾಧ್ಯವಿಲ್ಲ. ಆ ಪಕ್ಷದ ಚಿಹ್ನೆ ಅಡಿಯಲ್ಲೇ ಸ್ಪರ್ಧಿಸಬೇಕಾಗುತ್ತದೆ ಎಂದು ತಿಳಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಸಭೆಯ ನಂತರ ಸಂಜೆ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿದ ಪ್ರಮೋದ್‌ ಮಧ್ವರಾಜ್‌ ಅವರು, ನನಗೆ ಕಾಂಗ್ರೆಸ್‌ ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಇದೆ. ಆದರೆ, ಕ್ಷೇತ್ರ ಜೆಡಿಎಸ್‌ ತೆಕ್ಕೆಗೆ ಹೋಗಿದೆ. ಈ ಕ್ಷೇತ್ರ ಮತ್ತೆ ಕಾಂಗ್ರೆಸ್‌ ಪಾಲಿಗೆ ಬರಬೇಕಾದರೆ ಹೈಕಮಾಂಡ್‌ ನಿರ್ಧಾರ ಮಾಡಬೇಕು. ಇದು ಸಾಧ್ಯವಾಗದಿದ್ದರೆ ಮತ್ತು ಉಭಯ ಪಕ್ಷಗಳ ನಾಯಕರು ಒಪ್ಪಿದರೆ ಜೆಡಿಎಸ್‌ ಚಿಹ್ನೆ ಅಡಿಯೇ ಸ್ಪರ್ಧೆಗೆ ನಾನು ಸಿದ್ಧ ಎಂದು ತಿಳಿಸಿದರು.