ಹಾಸನ[ಮೇ.13]: ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪುತ್ರ ಪ್ರಜ್ವಲ್‌ ರೇವಣ್ಣ ಗೆಲುವಿನ ಬಗ್ಗೆ ಯಾವುದೇ ಕುತೂಹಲ ಇಲ್ಲ. ಆದರೆ, ಎಷ್ಟುಲೀಡ್‌ ಅಂತರದಲ್ಲಿ ಗೆಲುವು ಸಾಧಿಸುತ್ತಾನೆ ಅನ್ನುವ ಬಗ್ಗೆ ಕುತೂಹಲ ಇದೆ ಎಂದು ಪ್ರಜ್ವಲ್‌ ರೇವಣ್ಣ ತಾಯಿ ಭವಾನಿ ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ಕನಿಷ್ಠ ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾನೆ. ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಪರವಾಗಿ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಪುತ್ರನ ಗೆಲುವು ನಿಶ್ಚಿತ. ಮಂಡ್ಯ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಗೆಲುವು ಪಡೆಯಲಿದ್ದೇವೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನಕ್ಕೆ ಬರಲು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಕಾರಣ ಎಂಬ ಚರ್ಚೆ ಸಂಬಂಧ ಪ್ರತಿಕ್ರಿಯಿಸಿದ ಭವಾನಿ, ಯಾರು ಏನಾದರೂ ಹೇಳಿಕೊಳ್ಳಲಿ, ಯಾರು ಎಷ್ಟೆಷ್ಟುಕೆಲಸ ಮಾಡಿದ್ದಾರೆಂದು ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ, ಮಕ್ಕಳಿಗೆ ಗೊತ್ತು ಎಂದು ಟಾಂಗ್‌ ನೀಡಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಪ್ರಥಮ ಸ್ಥಾನ ಪಡೆದಿರುವುದು ಸಂತೋಷದ ವಿಷಯ. ಈ ಫಲಿತಾಂಶಕ್ಕೆ ನಮ್ಮ ಕುಟುಂಬ ವರ್ಗ ಮಾತ್ರ ಕಾರಣವಲ್ಲ, ಶಿಕ್ಷಣ ಇಲಾಖೆ ಮತ್ತು ನಮ್ಮ ಜಿಲ್ಲೆಯ ಮಕ್ಕಳ ಶ್ರಮವೂ ಕಾರಣವಾಗಿದೆ ಎಂದು ಹೇಳಿದರು.