ಉಮಾ ಎದುರು ಸಾಧ್ವಿ ಪ್ರಜ್ಞಾ ಕಣ್ಣೀರಧಾರೆ| ಮುತ್ತಿಟ್ಟು ಸಮಾಧಾನಪಡಿಸಿದ ಮಾಜಿ ಮಂತ್ರಿ

ಭೋಪಾಲ್‌[ಏ.30]: ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ್ದ ಪೊಲೀಸರು ಕಿರುಕುಳ ನೀಡಿದ್ದರು ಎಂದು ದೂರಿ ಮಾಧ್ಯಮದ ಸಮ್ಮುಖದಲ್ಲೇ ಕಣ್ಣೀರು ಹಾಕಿದ್ದ ಮಾಲೇಗಾಂವ್‌ ಪ್ರಕರಣದ ಆರೋಪಿ ಹಾಗೂ ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಇದೀಗ ಮತ್ತೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಕೇಂದ್ರ ಸಚಿವೆ ಉಮಾ ಭಾರತಿ ಅವರು ಸಾಧ್ವಿ ಸಿಂಗ್‌ ಅವರ ಕಣ್ಣೀರು ಒರೆಸುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಈ ಹಿಂದೆ ಭೋಪಾಲ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೇಂದ್ರ ಸಚಿವೆ ಉಮಾಭಾರತಿ ಹಾಗೂ ಸಾಧ್ವಿ ಸಿಂಗ್‌ ನಡುವೆ ಬಿರುಕು ಉಂಟಾಗಿದೆ ಎಂಬ ಮಾಧ್ಯಮಗಳ ವರದಿಗಳ ಬೆನ್ನಲ್ಲೇ, ಸೋಮವಾರ ಶ್ಯಾಮಲಾ ಹಿಲ್ಸ್‌ ಪ್ರದೇಶದಲ್ಲಿರುವ ಉಮಾ ನಿವಾಸಕ್ಕೆ ಬಂದು ಸಾಧ್ವಿ ಸಿಂಗ್‌ ಭೇಟಿ ಮಾಡಿದರು. ಈ ವೇಳೆ ಉಮಾರನ್ನು ಕಂಡ ಕೂಡಲೇ ಭಾವೋದ್ವೇಗಕ್ಕೆ ಒಳಗಾದ ಸಾಧ್ವಿ ಪ್ರಜ್ಞಾ ಕಣ್ಣೀರು ಸುರಿಸಿದ್ದಾರೆ. ಈ ವೇಳೆ ಸಾಧ್ವಿ ಠಾಕೂರ್‌ ಅವರನ್ನು ಅಪ್ಪಿಕೊಂಡ ಭಾರತಿ ಅವರು, ಸಾಧ್ವಿ ಸಿಂಗ್‌ ಹಣೆಗೆ ಮುತ್ತಿಟ್ಟರು. ಈ ವೇಳೆ ಉಮಾ ಕಾಲಿಗೆ ಎರಗಿ ಪ್ರಜ್ಞಾ ಆಶೀರ್ವಾದ ಪಡೆದರು. ವಾಪಸ್‌ ತೆರಳುವಾಗಲೂ ಪ್ರಜ್ಞಾ ಕಣ್ಣಿನಿಂದ ನೀರು ಸುರಿಯುತ್ತಿತ್ತು.

Scroll to load tweet…

ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಉಮಾ ಭಾರತಿ ಅವರು, ‘ದೀದಿ ಮಾ(ಪ್ರಜ್ಞಾ ಸಿಂಗ್‌ ಠಾಕೂರ್‌) ಅವರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದಾಗಲೇ, ಭೋಪಾಲ್‌ನಲ್ಲಿ ಬಿಜೆಪಿ ಭಾರೀ ಅಂತರದಿಂದ ಗೆಲ್ಲುವುದು ನಿಶ್ಚಿತವಾಗಿದೆ,’ ಎಂದು ಹೇಳಿದರು. ಭೋಪಾಲ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಸಾಧ್ವಿ ಸಿಂಗ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.