ಫರಿದಾಬಾದ್[ಮೇ.13]: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನದ ಸಂದರ್ಭದಲ್ಲಿ ಮತದಾರರ ಮೇಲೆ ಒತ್ತಡ ಹೇರಲು ಯತ್ನಿಸಿರುವ ಆರೋಪದಡಿಯಲ್ಲಿ ಪೋಲಿಂಗ್ ಏಜೆಂಟ್ ಒಬ್ಬರನ್ನು ಹರ್ಯಾಣದ ಫರಿದಾಬಾದ್ ನಲ್ಲಿ ಬಂಧಿಸಲಾಗಿದೆ. ಪೋಲಿಂಗ್ ಬೂತ್ ಏಜೆಂಟ್ ಒಬ್ಬರ ವಿಡಿಯೋ ಒಂದು ಟ್ವಿಟರ್ ನಲ್ಲಿ ಭಾರೀ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

ವಿಡಿಯೋದಲ್ಲಿ ಫರಿದಾಬಾದ್ ನ ಪೃಥಲಾದ ಆಸಾವತಿಯ ಪೋಲಿಂಗ್ ಬೂತ್ ಒಳಗೆ ನೀಲಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಕುಳಿತಿದ್ದಾನೆ. ಈ ವೇಳೆ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಮಳೆಯೊಬ್ಬರು ಮತ ಚಲಾಯಿಸಲು ತೆರಳಿದ ಕುಳಿತಿದ್ದ ವ್ಯಕ್ತಿ ಮತ ಚಲಾಯಿಸುತ್ತಿದ್ದ ಮಹಿಳೆಯ ಬಳಿ ತೆರಳುತ್ತಾನೆ. ಇದಾದ ಬಳಿಕ ಆತ ಆ ಮಹಿಳೆಯಿಂದ ಒತ್ತಾಯಪೂರ್ವಕವಾಗಿ ಬಟನ್ ಒತ್ತಿಸಿದ್ದಾನೆ ಎಂಬಂತೆ ಕಂಡು ಬಂದಿದೆ. ಬಳಿಕ ಮರಳಿ ತನು ಕುಳಿತಿದ್ದಲ್ಲಿಗೆ ಮರಳುತ್ತಾಣೆ. ಇದಾದ ಬಳಿಕ ಮತ್ತರಡು ಬಾರಿ ಆತ ಇದೇ ರೀತಿ ಮಾಡುತ್ತಿರುವುದು ವಿಡಿಯೋದಲ್ಲಿ ಗಮನಿಸಬಹುದು. ಆದರೆ ಈ ವಿಡಿಯೋ ಕುರಿತಾದ ಸತ್ಯಾ ಸತ್ಯತೆ ಏನು ಎಂಬುವುದು ಇನ್ನೂ ತಿಳಿದು ಬಂದಿಲ್ಲ.

ಆದರೆ ವಿಡಿಯೋದಲ್ಲಿ ನೀಲಿ ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿ ಹೀಗೆ ಮಾಡುತ್ತಿದ್ದಾಗ ಬೂತ್ ನಲ್ಲಿದ್ದ ಅಧಿಕಾರಿಗಳು ಆತನನ್ನು ತಡೆಯುವುದು ಕಂಡು ಬಂದಿಲ್ಲ. ಸದ್ಯ ಈ ವಿಡಿಯೋ ವನ್ನು ಹಲವಾರು ಮಂದಿ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಚುನಾವಣಾ ಆಯೋಗದ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲದೇ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗದಿಂದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ಸಿಕ್ಕ ಬೆನ್ನಲ್ಲೇ ಫರಿದಾಬಾದ್ ಚುನಾವಣಾ ವಿಭಾಗ ಟ್ವೀಟ್ ಮಾಡುತ್ತಾ 'ಈ ಕುರಿತಾಗಿ ಕೂಡಲೇ ಕ್ರಮ ಕೈಗೊಂಡಿದ್ದು, FIR ದಾಖಲಿಸಿ ಓರ್ವ ಯುವಕನನ್ನು ಜೈಲು ಕಂಬಿಯ ಹಿಂದೆ ಹಾಕಲಾಗಿದೆ. ವಿಚಾರಣೆ ನಡೆಸಿದ ಬಳಿಕ ಮೂವರು ಮಹಿಳೆಯರ ಮೇಲೆ ಒತ್ತಡ ಹೇರುವ ಯತ್ನ ಮಾಡಿರುವುದು ಖಚಿತವಾಗಿದೆ. ಇದನ್ನು ಹೊರತುಪಡಿಸಿ ಮತ್ತಾವುದೇ ಲೋಪವಾಗಿಲ್ಲ' ಎಂಬ ಸ್ಪಷ್ಟನೆ ನೀಡಿದೆ.