ಬೆಂಗಳೂರು[ಮಾ.11]: ದೇಶದಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಭಾನುವಾರ ರಾತ್ರಿಯಿಂದಲೇ ಜಿಲ್ಲಾಡಳಿತಗಳು ಚುರುಕಾಗಿದ್ದು ಜನಪ್ರತಿನಿಧಿಗಳು ಸರ್ಕಾರಿ ವಾಹನಗಳನ್ನು ಬಳಸದೆ ಖಾಸಗಿ ವಾಹನದಲ್ಲಿ ಪ್ರಯಾಣ ಮಾಡಿದ್ದಾರೆ.

ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಭಾನುವಾರ ಮಧ್ಯಾಹ್ನ ಹೊನ್ನಾವರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದರಿಂದ ಸಭೆ ಮುಗಿಸಿ ಶಿರಸಿಗೆ ಖಾಸಗಿ ವಾಹನದಲ್ಲಿ ತೆರಳಿದರು. ಅಂತೆಯೇ ಮುಖ್ಯಮಂತ್ರಿಗಳ ರಾಜಕೀಯ ಸಲಹಾ ಕಾರ್ಯದರ್ಶಿ ಎಚ್‌.ಎನ್‌. ಕೋನರಡ್ಡಿ ಶಿರಸಿಯ ರಾಘವೇಂದ್ರ ಮಠದಲ್ಲಿ ನಡೆದ ಜೆಡಿಎಸ್‌ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರು ಸಹ ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿ ವಾಪಸಾದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದ್ದುದರಿಂದ ಬೆಳಗ್ಗಿನಿಂದಲೇ ಖಾಸಗಿ ವಾಹನದಲ್ಲಿ ಪ್ರಯಾಣಿಸಿದರು. ಉಡುಪಿಯಲ್ಲಿ ಸಂಜೆ 6 ಗಂಟೆಗೆ ಪರಿವರ್ತನಾ ರಾರ‍ಯಲಿ ಮುಗಿಸುವಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಹೀಗಾಗಿ ಅವರು ಖಾಸಗಿ ಕಾರಿನಲ್ಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಹಿಂದುರುಗಿದರು. ಈ ಸಂದರ್ಭದಲ್ಲಿ ಸಚಿವ ಖಾದರ್‌ ಅವರೇ ಕಾರು ಚಲಾಯಿಸಿದರು.

ಬಾಗಲಕೋಟೆ ಮಾರ್ಗದಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಸಕ್ಕರೆ ಸಚಿವ ಆರ್‌.ಬಿ.ತಿಮ್ಮಾಪುರ ನರಗುಂದ-ನವಲಗುಂದ ಮಧ್ಯೆ ಸ್ವಯಂ ಪ್ರೇರಿತರಾಗಿ ಸರ್ಕಾರದ ವಾಹನವನ್ನು ಬಿಟ್ಟು ಖಾಸಗಿ ವಾಹನದಲ್ಲಿ ಪ್ರಯಾಣ ಬೆಳೆಸಿದರು.

ಇದೇವೇಳೆ ಬೆಳಗಾವಿ, ಕೊಪ್ಪಳ ಜಿಲ್ಲಾಡಳಿತಗಳು ರಾಜಕೀಯ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳ ತೆರವು ಕಾರ್ಯವನ್ನು ಭಾನುವಾರ ರಾತ್ರಿಯಿಂದಲೇ ಕೈಗೆತ್ತಿಕೊಂಡಿದೆ.