Asianet Suvarna News Asianet Suvarna News

ಅನುಕಂಪದ ಅಲೆಯಲ್ಲಿ ಸ್ಪರ್ಧಿಸಿದ ಸ್ತ್ರೀಯರಿಗೆಲ್ಲ ಜಯ: ತೇಜಸ್ವಿನಿ, ಸುಮಲತಾ ಹಣೆಬರಹ?

 ರಾಜಕೀಯದಲ್ಲಿ ಅನುಕಂಪ ಎಷ್ಟು ವಕೌರ್ಟ್ ಆಗುತ್ತೆ ಎನ್ನುವುದಕ್ಕೆ ಕರ್ನಾಟಕ ಪಾಲಿಟಿಕ್ಸ್ ಸಾಕ್ಷಿ. ಪತಿ ಸಾವಿನ ನಂತರ ಸ್ಪರ್ಧೆ ಮಾಡುವ ಪತ್ನಿಗೆ ಮತದಾರ ಅನುಕಂಪದ ಆಧಾರದ ಮೇಲೆ ಗೆಲುವು ಸಾಧಿಸಿರುವ ಹತ್ತಾರು ಉದಾಹರಣೆಗಳು ರಾಜ್ಯ ವಿಧಾನಸಭೆ ಚುನಾವಣೆಗಳು ಸಾಕ್ಷಿಯಾಗಿವೆ. ಹಾಗಾದ್ರೆ ಯಾರು ಯಾರು ತಮ್ಮ ಪತಿ ಅನುಕಂಪದ ಮೇಲೆ ಜಯಗಳಿಸಿದ್ದಾರೆ ಎನ್ನುವುದನ್ನು ಮುಂದೆ ನೋಡಿ.

Political Sympathy For Widows in Karnataka Elections
Author
Bengaluru, First Published Mar 16, 2019, 7:48 PM IST

ಬೆಂಗಳೂರು, [ಮಾ.16]: ಪತಿ ಸಾವಿನ ಬಳಿಕ ಉಪ ಚುನಾವಣೆಗಳಲ್ಲಿ ಪತ್ನಿ  ಸೋತ ಉದಾಹರಣೆಯೇ ಕರ್ನಾಟಕದಲ್ಲಿ ಇಲ್ಲ. ಗಂಡನನ್ನು ಕಳೆದುಕೊಂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಪತ್ನಿಯರು ಗೆಲುವಿನ ನಗೆ ಬಿರಿದ್ದಾರೆ. 

ಇದೀಗ ಸುಮಲತಾ ಅಂಬರೀಶ್ ಹಾಗು ತೇಜಸ್ವಿನಿ ಅನಂತಕುಮಾರ್‌ ಇವರಿಬ್ಬರು ಇದೇ ಅನುಕಂಪದ ಮೇಲೆ ಈ ಬಾರಿಯ ಲೋಕಸಭಾ ಚುನಾವಣಾ ಅಖಾಡದಲ್ಲಿದ್ದಾರೆ. 

ತೇಜಸ್ವಿನಿ ಅನಂತ್ ಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ  ಮತ್ತು ಮಂಡ್ಯದಿಂದ ಸುಮಲತಾ ಅಂಬರೀಶ್ ಅವರು ಅನುಕಂಪದ ಟ್ರಂಪ್ ಕಾರ್ಡ್ ಆಧಾರದ ಮೇಲೆ ಲೋಕಸಭಾ ಅಖಾಡಕ್ಕಿಳಿದಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲೂ ಅನುಕಂಪದ ಅಲೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ಹರಸಾಹಸ ನಡೆಸುತ್ತಿದೆ. ಪಕ್ಷ ಸಂಪರ್ಕಿಸಿದ ಪ್ರತಿಯೊಬ್ಬ ನಾಯಕನೂ ಕಣಕ್ಕೆ ಇಳಿಯಲು ನಿರಾಕರಿಸುತ್ತಿರುವುದು ತಲೆನೋವು ತಂದಿದೆ.

ಇಷ್ಟಕ್ಕೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾಯಕರು ಹಿಂಜರಿಯುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಕುತೂಹಲಕಾರಿ ಉತ್ತರ ದೊರೆಯುತ್ತಿದೆ.  ಅದು- ಪತಿ ಸಾವಿನ ಅನುಕಂಪದ ವಿರುದ್ಧ ಹೋರಾಡಿ ಗೆಲ್ಲಲು ಸಾಧ್ಯವಿಲ್ಲ ಎಂಬ ನಂಬಿಕೆ. 

ಈ ನಂಬಿಕೆಯ ಪರಿಣಾಮವಾಗಿಯೇ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಅವರ ನಿಧನದ ನಂತರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಬಿಜೆಪಿಯಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.

ತೇಜಸ್ವಿನಿ ಅವರು ಅನುಕಂಪದ ಅಲೆಯ ಸವಾರಿ ಮಾಡಲಿರುವುದರಿಂದ ಅವರ ವಿರುದ್ಧ ಕಣಕ್ಕೆ ಇಳಿಯಲು ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಗಳೇ ಇಲ್ಲ. ಪಕ್ಷವೇ ಪ್ರಿಯಕೃಷ್ಣ, ರಾಮಲಿಂಗಾರೆಡ್ಡಿ, ಗುರಪ್ಪ ನಾಯ್ದು, ಪ್ರೊ.ರಾಜೀವ್‌ಗೌಡ ಅವರಿಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದರೂ ಯಾರು ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ.

ಮಂಡ್ಯದಲ್ಲಿ ಸಮಲತಾರನ್ನ ಕೈಹಿಡಿಯುತ್ತಾ ಅನುಕಂಪ..?
 ಅಂಬರೀಷ್‌ ಅವರ ನಿಧನದ ನಂತರ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರಿಗೆ ಟಿಕೆಟ್‌ ನೀಡಬೇಕು ಎಂದು ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಹೈಕಮಾಂಡ್‌ ಮಟ್ಟದಲ್ಲಿ ವಾದ ಮಾಡಲು ಈ ಅನುಕಂಪದ ಕಾರಣವನ್ನೇ ಬಳಸಿದ್ದರು. 

ಆದರೆ, ಜೆಡಿಎಸ್‌ ಹಾಲಿ ಸಂಸದರಿರುವ ಕ್ಷೇತ್ರವಾದ ಕಾರಣ ಅದನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಯಿತು. ಇಷ್ಟಾಗಿಯೂ ಪರೋಕ್ಷವಾಗಿ ಬೆಂಬಲ ನೀಡಿ ಸುಮಲತಾ ಅವರನ್ನು ಕಣಕ್ಕೆ ಇಳಿಸಲು ಪ್ರೇರೇಪಿಸುತ್ತಿರುವ ನಾಯಕರ ಪ್ರಕಾರ ಸುಮಲತಾ ಕೂಡ ಅನುಕಂಪದ ಅಲೆಯಲ್ಲಿ ತೇಲಲಿದ್ದಾರೆ ಎಂದೇ ಹೇಳುತ್ತಾರೆ.

ಅನುಕಂಪದ ಅಲೆಯಲ್ಲಿ ಗೆದ್ದವರು

* 1967ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಎ.ಎಸ್‌.ಚುಂಚೇಗೌಡ ಅವರ ಪುತ್ರ ಎ.ಸಿ.ಶ್ರೀಕಂಠಯ್ಯ ಅವರು ನಾಲ್ಕು ಬಾರಿ ಚುನಾವಣೆ ಎದುರಿಸಿದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಶ್ರೀಕಂಠಯ್ಯ ಅವರ ಹಠಾತ್‌ ನಿಧನದ ನಂತರ 1999ರಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಪಾರ್ವತಮ್ಮ ಶ್ರೀಕಂಠಯ್ಯ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.

* ಮಾಜಿ ಸಚಿವ ಕೆ.ಎನ್‌. ನಾಗೇಗೌಡ ಅವರು 2004ರಲ್ಲಿ ದೆಹಲಿಯಲ್ಲಿ ಮೃತಪಟ್ಟಬಳಿಕ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕಿರುಗಾವಲು ಕ್ಷೇತ್ರದಿಂದ ಅವರ ಪತ್ನಿ ಎಂ.ಕೆ. ನಾಗಮಣಿ ನಾಗೇಗೌಡ ಭರ್ಜರಿ ಜಯ ಗಳಿಸಿದ್ದರು. ಮಾಜಿ ಸಂಸದ ಜಿ. ಮಾದೇಗೌಡ ಪುತ್ರ ಮಧು ಜಿ. ಮಾದೇಗೌಡ ವಿರುದ್ಧ ನಾಗಮಣಿ ನಾಗೇಗೌಡ ಗೆಲುವು ಸಾಧಿಸಿದ್ದರು.

* 1983 ಹಾಗೂ 85ರಲ್ಲಿ ಶಾಸಕರಾಗಿ ಶ್ರೀರಂಗಪಟ್ಟಣದಿಂದ ಆಯ್ಕೆಯಾಗಿದ್ದ ಎ.ಎಸ್‌.ಬಂಡಿಸಿದ್ದೇಗೌಡ ಅವರ ಮೃತಪಟ್ಟರು. ಇದರಿಂದಾಗಿ 1986ರಲ್ಲಿ ನಡೆದ ಉಪ ಚುನಾವಣೆಯಲ್ಲಿ ವಿಜಯಲಕ್ಷ್ಮೇ ಬಂಡಿಸಿದ್ದೇಗೌಡ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ವಿಜಯಲಕ್ಷ್ಮಿ ಅವರು ಬಳಿಕ 1994, 2004ರಲ್ಲೂ ಗೆಲುವು ಸಾಧಿಸಿದ್ದರು.

* ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಗುಂಡ್ಲುಪೇಟೆ ಶಾಸಕ ಎಚ್‌.ಎಸ್‌. ಮಹದೇವಪ್ರಸಾದ್‌ ಅವರು 2017ರ ಜನವರಿಯಲ್ಲಿ ನಿಧನ ಹೊಂದಿದರು. ಅವರಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಪತ್ನಿ ಗೀತಾ ಮಹದೇವಪ್ರಸಾದ್‌ (ಡಾ.ಎಂ.ಸಿ. ಮೋಹನಕುಮಾರಿ) ಭರ್ಜರಿ ಜಯಗಳಿಸಿದ್ದರು.

* ಇನ್ನು ಮಾಜಿ ಸಚಿವ ಖಮರುಲ್‌ ಇಸ್ಲಾಂ ಅವರು 2017ರ ಸೆಪ್ಟೆಂಬರ್‌ನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪತಿಯ ಸಾವಿನ ಅನುಕಂಪ ಅಲೆ ಆಧರಿಸಿ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ ಖನೀಜ್‌ ಫಾತಿಮಾ ಭರ್ಜರಿ ಜಯ ಗಳಿಸಿದರು.

* ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 1985 ಹಾಗೂ 1994ರಲ್ಲಿ ಎಸ್‌.ಡಿ. ಜಯರಾಂ ಗೆದ್ದಿದ್ದರು. ಅವರ ಹಠಾತ್‌ ನಿಧನದಿಂದ ತೆರವಾದ ಕ್ಷೇತ್ರಕ್ಕೆ 1998ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಯರಾಂ ಅವರ ಪತ್ನಿ ಪ್ರಭಾವತಿ ಜಯರಾಂ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.

* ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 2008ರಲ್ಲಿ ಶಾಸಕರಾಗಿದ್ದ ಜೆಡಿಎಸ್‌ನ ಎಂ.ಎಸ್‌. ಸಿದ್ದರಾಜು ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ 2008ರ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಂ.ಎಸ್‌. ಸಿದ್ದರಾಜು ಅವರ ಪತ್ನಿ ಕಲ್ಪನಾ ಸಿದ್ದರಾಜು ಗೆಲುವು ಸಾಧಿಸಿದರು.

* ಮಾಜಿ ಸಚಿವ ಎಚ್‌. ನಾಗಪ್ಪ ಅವರನ್ನು 2002ರ ಆಗಸ್ಟ್‌ನಲ್ಲಿ ವೀರಪ್ಪನ್‌ ಹತ್ಯೆ ಮಾಡಿದ ಬಳಿಕ 2004ರ ಚುನಾವಣೆಯಲ್ಲಿ ಹನೂರು ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿದ್ದ ಅವರ ಪತ್ನಿ ಪರಿಮಳಾ ಭರ್ಜರಿ ಜಯ ಸಾಧಿಸಿದ್ದರು.

Follow Us:
Download App:
  • android
  • ios